ಸುಮಾರು 24ವರ್ಷಗಳ ಹಿಂದೆ 25 ರೂಪಾಯಿ ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾ ಹೈಕೋರ್ಟ್ ಬುಧವಾರ ಸರ್ಕಾರಿ ಮಾಜಿ ವೈದ್ಯರೊಬ್ಬರಿಗೆ 3 ತಿಂಗಳ ಕಾಲ ಜೈಲುಶಿಕ್ಷೆ ವಿಧಿಸಿದೆ.
1985ರಲ್ಲಿ ಇಲ್ಲಿನ ರೈಲ್ವೆ ಆಸ್ಪತ್ರೆಯೊಂದರಲ್ಲಿ ಮುಖ್ಯ ವೈದ್ಯರಾಗಿದ್ದ ಬಲಗೋವಿಂದ ಪ್ರಸಾದ್ ಎಂಬವರು, ಆಸ್ಪತ್ರೆಯಲ್ಲಿ ಜಾಡಮಾಲಿಯಾಗಿರುವ ನೌಕರನೊಬ್ಬನಿಗೆ ರಜೆ ಮಂಜೂರು ಮಾಡಲು 25ರೂಪಾಯಿ ಲಂಚ ಕೇಳಿದ್ದರು. ಈ ಹಣ ಸ್ವೀಕರಿಸುತ್ತಿದ್ದಾಗಲೇ ವೈದ್ಯರು ಸಿಬಿಐ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
ಈ ಲಂಚ ಪ್ರಕರಣ ಸಿಬಿಐ ನ್ಯಾಯಾಲಯದಲ್ಲಿ ಏಳು ವರ್ಷಗಳ ದೀರ್ಘಕಾಲ ವಿಚಾರಣೆ ನಡೆದು, 1992ರ ನವೆಂಬರ್ 23ರಂದು ತೀರ್ಪು ಹೊರಬಿದ್ದಿತ್ತು. ಅಲ್ಲಿ ಒಂದು ವರ್ಷ ಜೈಲು ಶಿಕ್ಷೆ ಹಾಗೂ 1ಸಾವಿರ ರೂ.ದಂಡ ಕೂಡ ವಿಧಿಸಿತ್ತು, ಆದರೆ ಶೀಘ್ರವೇ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.
ಆದರೆ ವೈದ್ಯರು ಸಿಬಿಐ ಕೋರ್ಟ್ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.ಹೈಕೋರ್ಟ್‌ನಲ್ಲಿ ಈ ಪ್ರಕರಣ 16ವರ್ಷಗಳ ಕಾಲ ವಿಚಾರಣೆ ನಡೆಯಿತು. ಅಂತಿಮವಾಗಿ 24ವರ್ಷಗಳ ಬಳಿಕ 75ರ ಹರೆಯದ ಬಲಗೋವಿಂದ ಪ್ರಸಾದ್‌ಗೆ ಏಕಪೀಠದ ನ್ಯಾಯಮೂರ್ತಿಗಳಾದ ಕೆ.ಕೆ.ಮಂಡಲ್ ಅವರು, ಒಂದು ವರ್ಷದ ಶಿಕ್ಷೆಯನ್ನು 3ತಿಂಗಳಿಗೆ ಇಳಿಸಿ, 2ಸಾವಿರ ದಂಡ ಕಟ್ಟುವಂತೆ ಆದೇಶಿಸಿದರು. |