ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಕುರಿತಂತೆ ತಾನು ನೈತಿಕ ಹೊಣೆ ಹೊತ್ತು ಕ್ಷಮೆ ಯಾಚಿಸುವುದಾಗಿ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರು ಬುಧವಾರ ನೀಡಿದ್ದ ಬಹಿರಂಗ ಹೇಳಿಕೆಯನ್ನು ಮುಸ್ಲಿಮ್ ಮುಖಂಡರು ತಿರಸ್ಕರಿಸಿದ್ದಾರೆ.
ಯಾರಿಗೆ ಬೇಕು ನಿಮ್ಮ ಕ್ಷಮೆಯಾಚನೆ, ನಿಮ್ಮ ಕ್ಷಮೆಯಾಚನೆಯ ಹಿಂದಿರುವುದು 'ರಾಜಕೀಯ ಅವಕಾಶವಾದಿತನ' ಎಂದು ಕಿಡಿಕಾರಿರುವ ಮುಸ್ಲಿಮ್ ಉಲೇಮಾ ಮುಖಂಡರು, ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿರುವುದಕ್ಕೆ ಇದೀಗ ಕ್ಷಮೆಯಾಚಿಸುತ್ತಿರುವುದು ಅರ್ಥಹೀನವಾದದ್ದು ಎಂದಿದ್ದಾರೆ.
ಬಾಬ್ರಿಮಸೀದಿ ಧ್ವಂಸವನ್ನು ಯಾವ ಮುಸ್ಲಿಮ್ ತಾನೇ ಮರೆಯಲು ಸಾಧ್ಯ?ಇದೀಗ ಕಲ್ಯಾಣ್ ಸಿಂಗ್ ಕ್ಷಮೆ ಕೇಳಿದ ಕೂಡಲೇ ಮಾಡಿದ ಆರೋಪ ಸುಳ್ಳು ಎಂದು ಅರ್ಥವೇ? ಎಂದು ಜಾಮಿಯಾತುಲ್ ಉಲೇಮಾ ಇ ಹಿಂದ್‌ನ ಮೌಲಾನಾ ಹಮೀದ್ ನೋಮಾನಿ ಕಟುವಾಗಿ ಪ್ರಶ್ನಿಸಿದ್ದಾರೆ.
ಚುನಾವಣೆಯ ಹಿನ್ನೆಲೆಯಲ್ಲಿ ಕ್ಷಮೆಯಾಚನೆ ಹೊರಬರುತ್ತದೆ. ಮಸ್ಲಿಮರು ಆಕ್ರೋಶಿತರಾದ ಕೂಡಲೇ ಮುಲಾಯಂ ಸಿಂಗ್ ಯಾದವ್ ಕೂಡ ಮತ್ತೆ ತಮ್ಮ ಹೇಳಿಕೆಯನ್ನು ಬದಲಾಯಿಸಿ, ಮುಸ್ಲಿಮರನ್ನು ಸಮಾಧಾನ ಪಡಿಸುವ ಯತ್ನ ಮಾಡುತ್ತಾರೆ, ಅವರು ಮುಸ್ಲಿಮರನ್ನು ತುಂಬಾ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅವರು ಬಹುಶ ಮುಸ್ಲಿಮರು ಶಿಶುಗಳು ಎಂದು ಭಾವಿಸಿರಬೇಕು ಎಂದು ಸೈಯದ್ ಶಾಹಬುದ್ದದೀನ್ ಕಿಡಿಕಾರಿದ್ದಾರೆ. ಇತ್ತೀಚೆಗಷ್ಟೇ ಬಿಜೆಪಿ ತೊರೆದಿರುವ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಇದೀಗ ಸಮಾಜವಾದಿ ಸಖ್ಯ ಬೆಳೆಸುತ್ತಿದ್ದು, ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ನೈತಿಕ ಹೊಣೆ ಹೊತ್ತು ತಾನು ಕ್ಷಮೆಯಾಚಿಸುವುದಾಗಿ ನಿನ್ನೆ ಹೇಳಿಕೆ ನೀಡಿದ್ದರು. ನಾನು ಯಾವತ್ತೂ ಮುಸ್ಲಿಮ್ ವಿರೋಧಿಯಾಗಿರಲಿಲ್ಲ, ನಿಜಕ್ಕೂ ಮುಸ್ಲಿಮರೇ ಬಿಜೆಪಿ ವಿರೋಧಿಗಳು. ಇದೀಗ ಬಿಜೆಪಿ ತೊರೆದಿರುವ ನನ್ನ ನಿಲುವನ್ನು ಮುಸ್ಲಿಮರು ಸ್ವಾಗತಿಸುತ್ತಾರೆ ಎಂದು ಭಾವಿಸುವುದಾಗಿ ಹೇಳಿದ್ದರು. |