ಮಹಾರಾಷ್ಟ್ರದ ಡಿಜಿಪಿಯಾಗಿ ಎ.ಎನ್.ರಾಯ್ ಅವರನ್ನು ನೇಮಕಗೊಳಿಸಿರುವ ಸರ್ಕಾರದ ಕ್ರಮವನ್ನು ಬೊಂಬೈ ಹೈಕೋರ್ಟ್ ಗುರುವಾರ ತಿರಸ್ಕರಿಸಿದ್ದು, ನಾಲ್ಕು ವಾರಗಳಲ್ಲಿ ನೂತನ ಡಿಜಿಪಿಯನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಸೂಚಿಸಿದೆ.
ಡಿಜಿಪಿ ಹುದ್ದೆ ಅಲಂಕರಿಸಿರುವ ರಾಯ್ ಅವರನ್ನು ಮಹಾರಾಷ್ಟ್ರ ಸರ್ಕಾರ ಆ ಹುದ್ದೆಯಿಂದ ಕೂಡಲೇ ವಜಾಗೊಳಿಸುವಂತೆ ನ್ಯಾಯಪೀಠ ಆದೇಶಿಸಿದ್ದು, ರಾಯ್ ಅವರ ಆಯ್ಕೆ ಕಾನೂನಿನ ಪ್ರಕಾರ ಸರಿಯಲ್ಲ. ರಾಯ್‌ಕ್ಕಿಂತ ಮತ್ತೆ ಮೂವರು ಹಿರಿಯ ಅಧಿಕಾರಿಗಳು ಭಡ್ತಿಗಾಗಿ ಎದುರು ನೋಡುತ್ತಿರುವಾಗ ಸರಿಯಾದ ಕಾರಣವನ್ನು ನೀಡದೆ ರಾಯ್ ಅವರನ್ನು ನೇಮಕ ಮಾಡಿರುವುದು ಯಾಕೆ ಎಂದು ನ್ಯಾಯಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಆ ನಿಟ್ಟಿನಲ್ಲಿ ನಾಲ್ಕು ವಾರಗಳಲ್ಲಿ ನೂತನ ಡಿಜಿಪಿಯನ್ನು ನೇಮಕ ಮಾಡುವಂತೆ ಹೈಕೋರ್ಟ್ ಗಡುವು ನೀಡಿದೆ. ಈ ಮೊದಲೇ ರಾಯ್ ಅವರ ಆಯ್ಕೆಯನ್ನು ಸೆಂಟ್ರಲ್ ಆಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್ ವಜಾಗೊಳಿಸಿತ್ತು.
ಮಹಾರಾಷ್ಟ್ರ ಸರ್ಕಾರ 1974ರ ಬ್ಯಾಚ್‌ನ ಮೂರು ಹಿರಿಯ ಅಧಿಕಾರಿಗಳಾದ ಎಸ್.ಎಸ್.ವಿರ್ಕ್, ಜೆ.ಡಿ.ವಿರ್ಕಾರ್ ಹಾಗೂ ಸುಪ್ರಕಾಶ್ ಚಕ್ರವರ್ತಿ ಅವರನ್ನು ಕಡೆಗಣಿಸಿ, ರಾಯ್ ಅವರನ್ನು ಡಿಜಿಪಿಯನ್ನಾಗಿ ಮಾಡಿರುವ ಕ್ರಮವನ್ನು ಸಿಎಟಿ ಪ್ರಶ್ನಿಸಿತ್ತು.
ಆದರೆ ಡಿಜಿಪಿ ಹುದ್ದೆಗೆ ವಿರ್ಕ್ ಅವರನ್ನು ಸೂಚಿಸಲಾಗಿತ್ತು, ಅವರು ಪಂಜಾಬ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭ ಅಮಾನತುಗೊಂಡಿದ್ದರು. ಆ ಕಾರಣಕ್ಕೆ ಅವರನ್ನು ನೇಮಕ ಮಾಡಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ವಿತಂಡ ವಾದ ಹೂಡಿತ್ತು.
ಇದೀಗ ಗುರುವಾರ ಹೈಕೋರ್ಟ್ ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿಗಳಾದ ಸ್ವಾತಂತರ್ ಕುಮಾರ್ ಅವರು ಸಿಎಟಿಯ ಆದೇಶವನ್ನು ಎತ್ತಿ ಹಿಡಿದು, ರಾಯ್ ಆಯ್ಕೆ ಅನೂರ್ಜಿತ ಎಂದು ತೀರ್ಪು ನೀಡಿದೆ. |