ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ನೈತಿಕ ಹೊಣೆ ಹೊತ್ತು ಕ್ಷಮೆ ಕೇಳಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಅವರ ಜೊತೆಗಿನ ಸಖ್ಯ 'ರಾಜಕೀಯ ಸಂಧಾನ' ಅಲ್ಲ ಎಂದು ಮತ್ತೊಂದು ಸ್ಪಷ್ಟನೆ ನೀಡಿದ್ದಾರೆ.
ಎಸ್ಪಿ ವರಿಷ್ಠ ಮುಲಾಯಂ ಸಿಂಗ್ ಜತೆ ನಾಲ್ಕು ಗಂಟೆಗಳ ಕಾಲ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಲ್ಯಾಣ್ ಸಿಂಗ್, ಮುಲಾಯಂ ಹಾಗೂ ನನ್ನ ನಡುವೆ ಯಾವುದೇ ಗೆಳೆತನ ಮಾತ್ರ ಆದರೆ, ರಾಜಕೀಯ ಅನುಸಂಧಾನ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದೇ ಖಚಿತವಾದಲ್ಲಿ, ಇಟಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ ಎಂದರು.
ದೇಶದ ಬೃಹತ್ ರಾಜ್ಯವಾಗಿರುವ ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ಅವರಿಗೆ(ಸಮಾಜವಾದಿ ಪಕ್ಷಕ್ಕೆ) ಸಹಾಯಕವಾಗುವ ನಿಟ್ಟಿನಲ್ಲಿ ತಾನು ನಿರ್ಧಾರ ಕೈಗೊಂಡಿರುವುದಾಗಿ ವಿವರಿಸಿದ ಸಿಂಗ್, ಕೋಮುಶಕ್ತಿಗಳನ್ನು ಸೋಲಿಸುವುದೇ ತಮ್ಮ ಗುರಿಯಾಗಿದೆ ಎಂದು ಹೇಳಿದರು.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯಾದ ಕಲ್ಯಾಣ್ ಸಿಂಗ್ ಅವರು ಇತ್ತೀಚೆಗಷ್ಟೇ ಬಿಜೆಪಿಗೆ ಗುಡ್ ಬೈ ಹೇಳಿದ್ದರು. ಬಳಿಕ ತಾನು ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷವನ್ನು ಸೇರುವುದಾಗಿಯೂ ಘೋಷಿಸಿದ್ದರು. ಏತನ್ಮಧ್ಯೆ ತಮ್ಮ ಹಣಾಹಣಿ ಏನಿದ್ದರೂ ಕೋಮುವಾದಿಗಳಾದ ಬಿಜೆಪಿ ಮತ್ತು ಬಿಎಸ್ಪಿಯನ್ನು ಹಣಿಯುವುದೇ ವಿನಃ, ಎಸ್ಪಿ ಮತ್ತು ಕಾಂಗ್ರೆಸ್ ನಡುವೆ ಯಾವುದೇ ಸಂಘರ್ಷ ಇಲ್ಲ ಎಂದು ಮುಲಾಯಂ ಈ ಸಂದರ್ಭದಲ್ಲಿ ಸಮಜಾಯಿಷಿಕೆ ನೀಡಿದ್ದಾರೆ. |