ಉತ್ತರಪ್ರದೇಶ ಮದ್ರಸ ಶಿಕ್ಷಣ ಮಂಡಳಿಯು ರಾಜ್ಯದೆಲ್ಲೆಡೆ ಮದ್ರಸಗಳಲ್ಲಿ ಸಹ-ಶಿಕ್ಷಣವನ್ನು ನಿಷೇಧಿಸಿರುವ ಕ್ರಮದಲ್ಲಿ ತಾನು ಹಸ್ತಕ್ಷೇಪ ಮಾಡಲಾರೆ ಎಂದು ಕೇಂದ್ರ ಸರಕಾರ ಕೈತೊಳೆದುಕೊಂಡಿದೆ. ಇದಕ್ಕೆ ಕೇಂದ್ರ ನೀಡಿದ ಕಾರಣ 'ಅದು ರಾಜ್ಯಕ್ಕೆ ಸಂಬಂಧಪಟ್ಟ ವಿಷಯ'.
ಈ ಹಿಂದೆ, ರಾಜ್ಯಾದ್ಯಂತ ಮದ್ರಸಗಳಲ್ಲಿ ಹುಡುಗ-ಹುಡುಗಿಯರು ಜತೆಗೆ ಕಲಿಯುವ ಸಹ-ಶಿಕ್ಷಣ ಪದ್ಧತಿಯನ್ನು 'ಇಸ್ಲಾಮ್ ವಿರೋಧಿ' ಎಂಬ ಕಾರಣ ನೀಡಿ ಉ.ಪ್ರ. ಮದ್ರಸ ಮಂಡಳಿಯು ನಿಷೇಧಿಸಿತ್ತು. ಈ ನಿರ್ಧಾರದಲ್ಲಿ ಕೇಂದ್ರ ಮಧ್ಯಪ್ರವೇಶಿಸುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯಸಚಿವ ಎಂ.ಎ.ಎ.ಫಾತ್ಮಿ ತಿಳಿಸಿದ್ದಾರೆ.
'ಇಸ್ಲಾಂನಲ್ಲಿ ಪರ್ದಾ ಅತ್ಯಂತ ಮುಖ್ಯ. ಸಹ-ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟರೆ ಇದು ಬೇ-ಪರ್ದಗಿ (ಮುಖ ಮುಚ್ಚುವ ವಸ್ತ್ರರಾಹಿತ್ಯತೆ)'ಗೆ ಉತ್ತೇಜಿಸಿದಂತಾಗುತ್ತದೆ ಮತ್ತು ಇದು ಶರೀಯತ್‌ಗೆ ವಿರುದ್ಧವಾದದ್ದು. ಈ ಕಾರಣಕ್ಕೆ ಈ ಶೈಕ್ಷಣಿಕ ವರ್ಷದಿಂದ ಎಲ್ಲ ಮದ್ರಸಗಳು ಅದನ್ನು ಪ್ರೋತ್ಸಾಹಿಸದಂತೆ ನಿರ್ದೇಶನ ನೀಡಲಾಗಿದೆ ಎಂದು ಮಂಡಳಿ ಅಧ್ಯಕ್ಷ ಹಾಜಿ ರಿಜ್ವಾನ್ ಹಕ್ ತಿಳಿಸಿದ್ದಾರೆ.
ಈ ಮಧ್ಯೆ ಮಾತನಾಡಿದ ಫಾತ್ಮಿ, ಕೇಂದ್ರವು ಕೇಂದ್ರೀಯ ಮದ್ರಸ ಮಂಡಳಿಯೊಂದನ್ನು ಸ್ಥಾಪಿಸಲಿದ್ದು, ಅದು ವಿದ್ಯಾರ್ಥಿಗಳ ಎಲ್ಲ ಅವಶ್ಯಕತೆಗಳನ್ನು ನೋಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. 'ಮದ್ರಸಗಳು ಸದ್ಯಕ್ಕೆ ರಾಜ್ಯ ಮದ್ರಸ ಮಂಡಳಿಗಳ ಅಡಿಯಲ್ಲಿ ಬರುತ್ತವೆ. ಕಾರ್ಯ ನಿರ್ವಹಣೆಯ ಬಗ್ಗೆ ನಿರ್ಣಯ ಕೈಗೊಳ್ಳುವುದು ಅವರ ಜವಾಬ್ದಾರಿ' ಎಂದು ಫಾತ್ಮಿ ಹೇಳಿದರು.
ಈ ನಿಷೇಧ ನಿರ್ಧಾರದಿಂದಾಗಿ, ಕೆಲವು ಸಾವಿರ ಮಂದಿ ವಿದ್ಯಾರ್ಥಿನಿಯರ ಭವಿಷ್ಯ ಡೋಲಾಯಮಾನವಾಗಿದೆ. ಉತ್ತರ ಪ್ರದೇಶವೊಂದರಲ್ಲೇ 16 ಸಾವಿರಕ್ಕಿಂತಲೂ ಹೆಚ್ಚು ಮದ್ರಸಗಳಿದ್ದು, ಅವುಗಳಲ್ಲಿ ಸುಮಾರು 1900 ಮದ್ರಸಗಳು ಮಾತ್ರ ರಾಜ್ಯ ಮದ್ರಸ ಮಂಡಳಿಯಲ್ಲಿ ಹೆಸರು ನೋಂದಾಯಿಸಿವೆ. |