ನೀವು ನಂಬಿದ್ರೆ ನಂಬಿ, ಬಿಟ್ರೆ ಬಿಡಿ, ಉತ್ತರಪ್ರದೇಶದ ಪೊಲೀಸರು 80ವರ್ಷದ ಹಣ್ಣು, ಹಣ್ಣು ಮುದುಕನೊಬ್ಬನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವ ಘಟನೆ ನಡೆದಿದ್ದು, ಆ ಬಗ್ಗೆ ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿರುವ ಪೊಲೀಸರು ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಬದುವಾನ್ ಜಿಲ್ಲೆಯ ಶಾಬಾಜ್‌ಪುರ್ ಗ್ರಾಮದ 80ರ ದಶಕದ ಹಮೀದ್ ಖಾನ್ ಎಂಬ ಅಜ್ಜನ ಮೇಲೆ ಕಠಿಣ ಕಾಯ್ದೆಯಾದ ಗೂಂಡಾ ಕಾಯ್ದೆಯನ್ನು ದಾಖಲಿಸಿದ್ದಾರೆ.
ಪೊಲೀಸರು ತನ್ನ ಮೇಲೆ ಸುಳ್ಳು ದೋಷಾರೋಪ ಹೊರಿಸಿ ಗೂಂಡಾ ಕಾಯ್ದೆ ದಾಖಲಿಸಿರುವುದಾಗಿ ಅಜ್ಜಪ್ಪ ದೂರಿದ್ದಾನೆ. ಪ್ರಕರಣದ ಕುರಿತು ತಾನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು, ತನ್ನ ವಿರುದ್ಧ ಸುಳ್ಳು ದೂರು ಕೇಸು ದಾಖಲಿಸಿರುವ ಪ್ರಕರಣದ ಬಗ್ಗೆ ತಾವು ಮಧ್ಯೆ ಪ್ರವೇಶಿಸಬೇಕೆಂದು ಮನವಿ ಮಾಡಿಕೊಂಡಿರುವುದಾಗಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಕಳೆದ ವರ್ಷದ ಜೂನ್ ತಿಂಗಳಲ್ಲಿ ಕೆಲವು ವ್ಯಕ್ತಿಗಳು ತನ್ನ ಮನೆಯಿಂದ ಶಸ್ತ್ರಾಸ್ತ್ರಗಳನ್ನು ಹಾಗೂ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದರು. ಆ ಬಗ್ಗೆ ತಾನು ಶಾಸ್ವಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ, ಪಿತೂರಿ ನಡೆಸಿದ ಪೊಲೀಸ್ ಅಧಿಕಾರಿ ನನ್ನ ಮೇಲೆಯೇ ಗೂಂಡಾ ಕಾಯ್ದೆಯಡಿ ದೂರು ದಾಖಲಿಸಿಕೊಂಡಿರುವುದಾಗಿ ಖಾನ್ ಆರೋಪಿಸಿದ್ದಾರೆ. ಅಲ್ಲದೇ ಈ ಪ್ರಕರಣದ ಬಗ್ಗೆ ತಾನು ಮಾನವ ಹಕ್ಕು ಆಯೋಗಕ್ಕೂ ದೂರು ನೀಡುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪ್ರಕಾಶ್ ಅವರನ್ನು ಮಾಧ್ಯಮದವರು ಸಂಪರ್ಕಿಸಿದಾಗ, ಘಟನೆ ಕುರಿತು ಅಚ್ಚರಿ ವ್ಯಕ್ತಪಡಿಸಿದ ಅವರು, ಅಜ್ಜನ ಮನವಿ ನನಗೆ ತಲುಪಿಲ್ಲ, ಆ ಬಗ್ಗೆ ತನಿಖೆ ನಡೆಸಲು ತಾನು ಆದೇಶಿಸುವುದಾಗಿ ತಿಳಿಸಿದ್ದು, ಯಾರು ತಪ್ಪಿತಸ್ಥರೋ ಆ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. |