ಭದ್ರತೆಯ ಬೆದರಿಕೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೈದಿಗಳಿಂದ ತುಂಬಿ ತುಳುಕುತ್ತಿರುವ ಜೈಲಿನಲ್ಲಿ ಭಯೋತ್ಪಾದಕರನ್ನು ಕೂಡಿಹಾಕದೆ, ಅವರಿಗಾಗಿಯೇ ಎಲ್ಲಾ ರಾಜ್ಯಗಳಲ್ಲೂ ಪ್ರತ್ಯೇಕ ಜೈಲುಗಳನ್ನು ನಿರ್ಮಿಸಬೇಕಾದ ಅಗತ್ಯ ಇದೆ ಎಂದು ಸರ್ವೋಚ್ಛನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಭಯೋತ್ಪಾದಕರಿಗೆ ಮತ್ತು ತೀವ್ರವಾದಿಗಳಿಗೆ ಎಲ್ಲಾ ರಾಜ್ಯಗಳಲ್ಲೂ ಪ್ರತ್ಯೇಕ ಜೈಲಿನ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಕೆ.ಜಿ.ಬಾಲಕೃಷ್ಣನ್ ಹಾಗೂ ನ್ಯಾಯಮೂರ್ತಿ ಪಿ.ಸದಾಶಿವಂ ಅವರನ್ನೊಳಗೊಂಡ ಪೀಠ ಹೇಳಿದೆ.
ಅಲ್ಲದೇ ಭದ್ರತೆಯ ತೊಂದರೆಯ ಹಿನ್ನೆಲೆಯಲ್ಲಿ ಭಯೋತ್ಪಾದಕರನ್ನು ಮತ್ತು ತೀವ್ರವಾದಿಗಳನ್ನು ಬೇರೆ ಆರೋಪದಲ್ಲಿ ಬಂಧಿಸಲ್ಪಟ್ಟ, ವಿಚಾರಣೆಯಲ್ಲಿದ್ದ ಕೈದಿಗಳ ಜೊತೆ ಇರಿಸಬಾರದು ಎಂದು ಪೀಠ ತಿಳಿಸಿದೆ.
ಕೈದಿಗಳನ್ನು ಹೊರ ಕರೆದೊಯ್ಯುವ, ಪ್ರಾರ್ಥನೆಗೆ ಕರೆದೊಯ್ಯುವ ಬಗ್ಗೆ ಸೇರಿದಂತೆ ಕೆಲವೊಂದು ನಿರ್ದೇಶನಗಳನ್ನು ನೀಡುವುದಾಗಿಯೂ ಸುಪ್ರೀಂಕೋರ್ಟ್ ಹೇಳಿದೆ.
ಏನೇ ಇರಲ್ಲಿ, ಸಲಹೆಯ ಬಗ್ಗೆ ನ್ಯಾಯಾಲಯ ಒಪ್ಪಂದ ಮಾಡಿಕೊಳ್ಳುವುದಿಲ್ಲ, ದೇಶಾದ್ಯಂತ ಇರುವ ಜೈಲುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕು. ಈ ಬಗ್ಗೆ ನಾವು ಕೇಂದ್ರದ ಜೊತೆ ಚರ್ಚಿಸುವುದಿಲ್ಲ. ಕಾನೂನು ಸುವ್ಯವಸ್ಥೆ ರಾಜ್ಯಗಳಿಗೆ ಸಂಬಂಧಿಸಿದ ವಿಷಯ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಂಬೈ ದಾಳಿಯ ಹಿನ್ನೆಲೆಯಲ್ಲಿ, ಭಯೋತ್ಪಾದನೆ ನಿಗ್ರಹಕ್ಕೆ ಸ್ಪೆಶಲ್ ಸೆಂಟ್ರಲೈಸ್ಡ್ ಪೋರ್ಸ್ ಮತ್ತು ಭಯೋತ್ಪಾದಕರಿಗೆ ಪ್ರತ್ಯೇಕ ಜೈಲುಗಳನ್ನು ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂಬ ವಕೀಲ ಡಿ.ಕೆ.ಗಾರ್ಗ್ ಅವರು ಗಮನಸೆಳೆದಿದ್ದಕ್ಕೆ ಪ್ರತಿಯಾಗಿ ಸರ್ವೋಚ್ಚನ್ಯಾಯಾಲಯ ಈ ಅಭಿಪ್ರಾಯ ನೀಡಿದೆ. |