ಮಂಗಳೂರು ಪಬ್ ದಾಳಿಯ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ ನೀಡಿದ ವರದಿಗೆ ಅಸಮಾಧಾನ ಪಟ್ಟಿಕೊಳ್ಳಲು ಈಕೆ ಯಾರು ?ಎಂದು ಸಾರ್ವಜನಿಕವಾಗಿ ಕೆಂಡಮಂಡಲರಾಗಿದ್ದ ನಿರ್ಮಲಾ ವೆಂಕಟೇಶ್‌ಗೆ ಕೇಂದ್ರ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಣುಕಾ ಚೌಧುರಿ ಷೋಕಾಸ್ ನೋಟಸ್ ಜಾರಿ ಮಾಡಿದ್ದಾರೆ.
ದಾಳಿಗೆ ಈಡಾಗಿದ್ದ ಯುವತಿಯರನ್ನು ಭೇಟಿ ಮಾಡದೆ ಕೇವಲ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಕೇವಲ ಪಬ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಶ್ರೀರಾಮ ಸೇನೆಯ ದಾಳಿಯನ್ನು ಅವಗಣಿಸಿದ್ದಾರೆ ಎಂದು ಚೌಧುರಿ ನಿರ್ಮಲಾ ವಿರುದ್ಧ ಕಿಡಿ ಕಾರಿದ್ದರು.
ಅಲ್ಲದೇ ಶ್ರೀರಾಮ ಸೇನೆಯ ನಿಷೇಧ ಈ ಸಮಸ್ಯೆಗೆ ಪರಿಹಾರ ಅಲ್ಲ ಎಂದಿದ್ದರು. ರಾಜ್ಯದಲ್ಲಿ ಮಹಿಳೆಯರ ರಕ್ಷಣೆಗೆ ಭಾರತೀಯ ಜನತಾ ಪಾರ್ಟಿಯ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ರಾಷ್ಟ್ರೀಯ ಮಹಿಳಾ ಆಯೋಗ ಮುಕ್ತಕಂಠದಿಂದ ಪ್ರಶಂಸೆ ಮಾಡಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಮಲಾ ಭೇಟಿಯನ್ನು ತಮ್ಮ ಸರ್ಕಾರದ ಬೆನ್ನು ತಟ್ಟಿಕೊಳ್ಳಲು ಬಳಸಿಕೊಂಡಿದ್ದರು.
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಕರ್ತವ್ಯ ನಿರ್ವಹಿಸುವಲ್ಲಿ ತೋರಿರುವ ನಿರ್ಲಕ್ಷ್ಯಕ್ಕಾಗಿ ನಿಮ್ಮ ಮೇಲೆ ಕ್ರಮ ಜರುಗಿಸಬಾರದೇಕೆ ಎಂದು ಕಾರಣ ತಿಳಿಸಿ ಎಂದು ಷೋಕಾಸ್ ನೋಟಿಸ್‌ನಲ್ಲಿ ಕೇಳಲಾಗಿದೆ. ಆಯೋಗದ ಸದಸ್ಯೆಯಾಗಿ ಸಾರ್ವಜನಿಕ ಹಿತಕ್ಕೆ ಧಕ್ಕೆ ತರುವಂತೆ ತಾವು ನಡೆದುಕೊಂಡಿರುವ ಕುರಿತು ವಿವರಣೆ ನೀಡಿ ಎಂದೂ ನೋಟಿಸ್‌ನಲ್ಲಿ ಸೂಚಿಸಲಾಗಿದೆ. |