ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯೊಂದು ತನ್ನನ್ನು ಹತ್ಯೆಗೈಯುವುದಾಗಿ ಬೆದರಿಸಿ ತನ್ನ ವೆಬ್‌ಸೈಟ್‌ನಲ್ಲಿ ಬರಹವೊಂದನ್ನು ಹಾಕಿರುವುದಾಗಿ ವಿರೋಧ ಪಕ್ಷದ ಮುಖಂಡ ಎಲ್.ಕೆ.ಆಡ್ವಾಣಿ ಗುರುವಾರ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.
ಆಡ್ವಾಣಿಯವರಿಗೆ ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರಕ್ಕೆ, ಗೃಹ ಕಾರ್ಯದರ್ಶಿ, ಡೈರೆಕ್ಟರ್, ಗುಪ್ತಚರ ಇಲಾಖೆಗೆ ಮಾಹಿತಿ ನೀಡಿರುವುದಾಗಿ ಆಪ್ತ ವಲಯದ ಮೂಲಗಳು ತಿಳಿಸಿವೆ.
ಭಾರತೀಯ ಜನತಾಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿರುವ ಆಡ್ವಾಣಿಯವರಿಗೆ ಈಗಾಗಲೇ ಸಾಕಷ್ಟು ಬಾರಿ ಕೊಲೆ ಬೆದರಿಕೆ ಬಂದಿದ್ದವು. ಇದೀಗ ಆಡ್ವಾಣಿ ಅವರ ವೆಬ್‌ಸೈಟ್‌ನಲ್ಲಿ ಹರ್ಕತ್ ಉಲ್ ಮುಜಾಹಿದೀನ್ ಸಂಘಟನೆ ಹತ್ಯೆ ಬೆದರಿಕೆ ಪೋಸ್ಟ್‌ವೊಂದನ್ನು ಹಾಕಿರುವುದಾಗಿ ಹೇಳಿದೆ.
ಈ ಬೆದರಿಕೆಯ ಬರಹವನ್ನು ತಕ್ಷಣವೇ ವೆಬ್‌ಸೈಟ್‌ನಿಂದ ತೆಗೆದುಹಾಕಲಾಯಿತು ಎಂದು ಆಡ್ವಾಣಿ ಕಚೇರಿಯ ಮೂಲಗಳು ತಿಳಿಸಿವೆ. ಆಡ್ವಾಣಿ ಕಳೆದ ಎರಡು ದಿನಗಳಿಂದ ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದರು. ಇಂದು ಬೆಳಿಗ್ಗೆ ಅವರು ದೆಹಲಿಗೆ ವಾಪಸಾಗಿದ್ದಾರೆ. |