ಉಲ್ಫಾ ಉಗ್ರಗಾಮಿ ಸಂಘಟನೆಯ ಪ್ರಮುಖ ವರಿಷ್ಠರು ಪಾಕಿಸ್ತಾನದ ಇಂಟೆಲಿಜೆನ್ಸ್ ಏಜೆನ್ಸಿ (ಐಎಸ್ಐ) ಹಾಗೂ ಬಾಂಗ್ಲಾದೇಶಿ ಬೇಹುಗಾರಿಕೆ ಇಲಾಖೆ ಡಿಜಿಎಫ್‌ಐ ಜತೆ ಸಖ್ಯ ಹೊಂದಿರುವುದಾಗಿ ಉಲ್ಫಾದ ಮಾಜಿ ಮುಖಂಡನೊಬ್ಬ ಗಂಭೀರವಾಗಿ ಆರೋಪಿಸಿದ್ದಾನೆ.
ಉಲ್ಫಾದ ಪ್ರಮುಖ ಮುಖಂಡರು ಐಎಸ್‌ಐ ಹಾಗೂ ಡಿಜಿಎಫ್ಐ ಮತ್ತು ಕೆಲವು ಇಸ್ಲಾಮಿಕ್ ಸಂಘಟನೆಗಳೊಂದಿಗೆ ಗಳಸ್ಯಕಂಠಸ್ಯ ಸಂಬಂಧ ಹೊಂದಿದ್ದು, ಅವುಗಳ ಬೆಂಬಲವಿಲ್ಲದೆ ಯಾವುದನ್ನೂ ಮಾಡಲು ಸಾಧ್ಯವಿಲ್ಲ ಎಂದು ಉಲ್ಫಾದ 28ನೇ ಬೆಟಾಲಿಯನ್ ಮಾಜಿ ಮುಖಂಡ ಮೃಣಾಲ್ ಹಜಾರಿಕಾ ತನ್ನ 150ಮಂದಿ ಕೇಡರ್‌ಗಳೊಂದಿಗೆ ರಹಸ್ಯ ಸ್ಥಳವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ದೂರಿದ್ದಾನೆ.
ಈ ಹಿಂದೆ ಅಸ್ಲಾಂನಲ್ಲಿ ಮೃಣಾಲ್‌ನ ಸ್ವಯಂಘೋಷಿತ ಬೆಟಾಲಿಯನ್ ಉಲ್ಫಾದ ಪ್ರತಿರೂಪದಂತಿರುವ ಕ್ರೂರ ಸಂಘಟನೆಯಾಗಿದ್ದು, ಕೊಲೆ, ಸುಲಿಗೆ ಹಾಗೂ ಅಪಹರಣದಂತಹ ಹಲವಾರು ಕೃತ್ಯಗಳಲ್ಲಿ ಭಾಗಿಯಾಗಿತ್ತು.
ಬಾಂಗ್ಲಾದ ಕೆಲವು ನಗರಗಳಲ್ಲಿ ಉಲ್ಫಾದ ಹಲವಾರು ಶಿಬಿರಗಳಿರುವುದಾಗಿಯೂ ಆತ ವಿವರಿಸಿದ್ದಾನೆ. ಅವೆಲ್ಲವೂ ಬಾಂಗ್ಲಾದ ಅಧಿಕೃತ ಗೂಢಚಾರ ಸಂಸ್ಥೆಯ ಕೃಪಾಪೋಷಿತದಿಂದ ನಡೆಯುತ್ತಿದೆ ಎಂದು ದೂರಿದ್ದಾನೆ. |