ಸೇನಾಪಡೆಗಳಲ್ಲಿ ಕೋಮುವಾದಿ ಶಕ್ತಿಗಳ ಜಾಲ ಸಕ್ರಿಯವಾಗಿದೆ ಎಂಬುದನ್ನು ತಳ್ಳಿಹಾಕಿದ ಸೇನಾ ಮುಖ್ಯಸ್ಥ ಜನರಲ್ ದೀಪಕ್ ಕಪೂರ್ ಅವರು, ಮಾಲೇಗಾಂವ್ ಸ್ಫೋಟದಲ್ಲಿ ಲೆಫ್ಟಿನೆಂಟ್ ಕರ್ನಲ್ ಭಾಗಿಯಾಗಿರುವುದು ಕೇವಲ ಆದೊಂದು ದಾರಿ ತಪ್ಪಿದ ಘಟನೆ ಎಂದು ಹೇಳಿದ್ದಾರೆ.
ಮಾಲೇಗಾಂವ್ ಬಾಂಬ್ ಸ್ಫೋಟದ ಪ್ರಮುಖ ರೂವಾರಿ ಮತ್ತು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಿಂದ ತನಿಖೆ ಎದುರಿಸುತ್ತಿರುವ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ವಿರುದ್ಧ ಸೇನೆ ಕೂಡ ಆಂತರಿಕವಾಗಿ ತನಿಖೆ ನಡೆಸುತ್ತಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಈ ವಿಷಯವನ್ನು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದು, ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವುದಕ್ಕಾಗಿ ಸೇನೆಯ ಆಂತರಿಕ ಆಡಳಿತ ಮತ್ತು ಪ್ರಕ್ರಿಯೆಗಳನ್ನು ಬಲವರ್ಧನೆಗೊಳಿಸಲಾಗುತ್ತಿದೆ ಎಂದು ಹೇಳಿದರು.
ಸೇನೆಯಲ್ಲಿ ಸಂಘಟನಾತ್ಮಕ ಸಂಸ್ಕೃತಿ ಮತ್ತು ರಾಷ್ಟ್ರೀಯವಾದಿ ಜಾತ್ಯತೀತದ ಬೇರುಗಳು ಆಳವಾಗಿವೆ ಮತ್ತು ಶಕ್ತಿಯುತವಾಗಿದೆ ಎಂದು ಕಪೂರ್ ತಿಳಿಸಿದ್ದಾರೆ. |