ಪಾಕಿಸ್ತಾನದ ಪರಮಾಣು ಬಾಂಬ್ ಜನಕ ಎ.ಕ್ಯೂ.ಖಾನ್ ಅವರನ್ನು ಹೈಕೋರ್ಟ್ ಸ್ವತಂತ್ರ ಪ್ರಜೆ ಎಂದು ತೀರ್ಪು ನೀಡಿರುವುದಕ್ಕೆ ಭಾರತ ಆತಂಕ ವ್ಯಕ್ತಪಡಿಸಿದ್ದು, ಖಾನ್ ಬಿಡುಗಡೆ ಜಾಗತಿಕ ಶಾಂತಿ ಪ್ರಕ್ರಿಯೆಗೆ ಮಾರಕವಾದದ್ದು ಎಂದು ಹೇಳಿದೆ.
ಅಬ್ದುಲ್ ಖಾದೀರ್ ಖಾನ್ ಹಲವಾರು ಮೂಲಭೂತವಾದಿ ಸಂಘಟನೆಗಳ 'ಪೋಸ್ಟರ್ ಬಾಯ್' ಆಗಿದ್ದಾರೆ. ಅಲ್ಲದೇ ಇಸ್ಲಾಮ್ ಉಗ್ರಗಾಮಿಗಳ ಪಾಲಿಗೆ ಜನಪ್ರಿಯ ವ್ಯಕ್ತಿಯೂ ಹೌದು. ಇದೀಗ ಮುಕ್ತ ಓಡಾಟದ ಅವಕಾಶ ಪಡೆದಿರುವುದು ಜಾಗತಿಕ ಶಾಂತಿ ಪ್ರಕ್ರಿಯೆಗೆ ದೊಡ್ಡ ಸವಾಲಾಗಲಿದೆ ಎಂದು ಭಾರತ ಆಪಾದಿಸಿದೆ.
ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮದ ಮಾಜಿ ಮುಖ್ಯಸ್ಥ ಅಬ್ದುಲ್ ಖಾದೀರ್ ಖಾನ್ (72ವ) ಅವರನ್ನು ಗೃಹಬಂಧನದಲ್ಲಿ ಇರಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಸರ್ದಾರ್ ಮುಹಮ್ಮದ್ ಅಸ್ಲಾಮ್ ಅವರನ್ನು ಶುಕ್ರವಾರ ಬಂಧಮುಕ್ತಗೊಳಿಸಿ ತೀರ್ಪು ನೀಡಿದ್ದರು.
ಅಲ್ಲದೇ ಎ.ಕ್ಯೂ.ಖಾನ್ ಅವರಿಗೆ ಸರ್ಕಾರ ವಿಐಪಿ ಪ್ರೋಟೋಕಾಲ್ ಪ್ರಕಾರ ಬಿಗಿ ಭದ್ರತೆಯನ್ನೂ ನೀಡಬೇಕೆಂದು ನ್ಯಾಯಪೀಠ ಈ ಸಂದರ್ಭದಲ್ಲಿ ಸೂಚನೆ ನೀಡಿತ್ತು. |