ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ಬಗ್ಗೆ ಹಲವಾರು ಮುಸ್ಲಿಂ ನಾಯಕರಿಂದ ಬಂದಿರುವ ತೀಕ್ಷ್ಣ ಪ್ರತಿಕ್ರಿಯೆಗಳಿಂದ ರೋಸಿಹೋಗಿರುವ ಸಮಾಜವಾದಿ ಪಕ್ಷ, ಅವರೆಲ್ಲಾ 'ಸಮಯಸಾಧಕರು (ಗಾಳಿ ಬಂದತ್ತ ತೂರಿಕೊಳ್ಳುವವರು)' ಎಂದು ಟೀಕಿಸುತ್ತಾ, ಪ್ರತಿದಾಳಿ ಆರಂಭಿಸಿದೆ.
ಬಂಡಾಯ ನಾಯಕರಾದ ಸಲೀಂ ಶೇರ್ವಾನಿ ಮತ್ತು ಬಂಡಾಯ ಸಂಸದ ಶಫೀಕ್ ಉರ್ ರಹಮಾನ್ ಅವರನ್ನು ಉಲ್ಲೇಖಿಸುತ್ತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್, 'ಲೋಕಸಭೆ ಚುನಾವಣೆಗಳಿಗೆ ಟಿಕೆಟ್ ನಿರಾಕರಿಸಿದ ನಂತರ ಅವರು ಕಲ್ಯಾಣ್ ಸಿಂಗ್‌ರನ್ನು ಟೀಕಿಸುವ ಅನುಕೂಲವನ್ನು ತಿಳಿದುಕೊಂಡಿದ್ದಾರೆ' ಎಂದು ಟೀಕಿಸಿದರು.
ಕಲ್ಯಾಣ್ ಪರವಾಗಿ ಪಕ್ಷವು ವಾಲಿದ್ದಕ್ಕೆ ತೀವ್ರವಾಗಿ ಕೆಂಡ ಕಾರಿದ್ದ, ಸಮಾಜವಾದಿ ಪಕ್ಷದ ಮುಸ್ಲಿಂ ಮುಖ ಮತ್ತು ಬೆಂಕಿ ಚೆಂಡು ನಾಯಕ ಎಂದೇ ಗುರುತಿಸಿಕೊಂಡಿರುವ ಮೊಹಮ್ಮದ್ ಆಜಂ ಖಾನ್ ವಿರುದ್ಧವೂ ಅಮರ್ ಸಿಂಗ್ ಟೀಕೆಯ ಸುರಿಮಳೆಗೈದಿದ್ದಾರೆ.
2004ರಲ್ಲಿ ಬಿಎಸ್ಪಿ-ಬಿಜೆಪಿ ಸರಕಾರ ಪತನಗೊಂಡ ಬಳಿಕ ಮುಲಾಯಂ ಸಿಂಗ್ ಅವರು ಮುಖ್ಯಮಂತ್ರಿಯಾದಾಗ, ಆಗಷ್ಟೇ ಎಸ್ಪಿ ಸೇರಿದ್ದ ಕಲ್ಯಾಣ್ ಪುತ್ರ ರಾಜವೀರ್ ಹಾಗೂ ಕಲ್ಯಾಣ್‌ರ ಮತ್ತೊಬ್ಬ ಆಪ್ತರಾಗಿದ್ದ ಕುಸುಮ್ ರಾಯ್ ಅವರನ್ನೂ ಸಚಿವರನ್ನಾಗಿ ನೇಮಿಸಲಾಗಿತ್ತು ಎಂಬುದನ್ನು ಅಮರ್ ನೆನಪಿಸಿದರು.
ರಾಜ್‌ವೀರ್, ಕುಸುಮ್ ರಾಯ್ ಜೊತೆ ಎಸ್ಪಿಯ ಆಜಂ ಖಾನ್ ಅವರನ್ನೂ ಸಂಪುಟ ಸಚಿವರನ್ನಾಗಿ ನೇಮಿಸಲಾಗಿತ್ತು. ಆವಾಗ ಯಾರೂ ಆಕ್ಷೇಪ ಎತ್ತಿರಲಿಲ್ಲ... ಹೀಗಾಗಿ ರಾಜಕೀಯ ಸಮಯಸಾಧಕರಾಗಿರಬಾರದು ಎಂದು ಅಮರ್ ಸಿಂಗ್ ಹೇಳಿದರು.
ಕಳೆದ ಲೋಕಸಭೆ ಚುನಾವಣೆಗಳಿಗೆ ತಮ್ಮ ರಾಮಪುರ ಕ್ಷೇತ್ರದಿಂದ 'ಹೊರಗಿನವರಾದ' ಜಯಪ್ರದಾ ಅವರನ್ನು ಕಣಕ್ಕಿಳಿಸಿದ ಎಸ್ಪಿ ಕ್ರಮದಿಂದ ಖಾನ್ ರೋಸಿ ಹೋಗಿದ್ದರು. ಈ ಬಾರಿ ಖಾನ್ ಅವರು ಮಾಯಾವತಿ ನೇತೃತ್ವದ ಬಿಎಸ್ಪಿ ಸೇರಲಿದ್ದಾರೆ ಎಂಬ ಬಗ್ಗೆ ಊಹಾಪೋಹಗಳೆದ್ದಿವೆ. |