ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ತುಂಬಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಅವರು ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿ 'ಮಹಾ ಮೃತ್ಯಂಜಯ ಯಾಗ' ಆರಂಭಿಸಲಾಗಿದೆ.
ವಾಜಪೇಯಿ ಅವರ ಆರೋಗ್ಯ ಶೀಘ್ರ ಗುಣವಾಗಲಿ ಎಂದು ಪ್ರಾರ್ಥಿಸಿ ಪುಣೆಯ ಮನೋರಮಾ ನಗರದ ಶಿವಮಂದಿರಲ್ಲಿ ಬಿಜೆಪಿ ರಾಷ್ಟ್ರೀಯ ಸಮಿತಿಯ ಮಾಜಿ ಸದಸ್ಯ ಓಂಪ್ರಕಾಶ್ ಶರ್ಮಾ ಸೇರಿದಂತೆ ಹಲವಾರು ಸಂಘಟನೆಗಳು ಈ ಯಾಗವನ್ನು ಹಮ್ಮಿಕೊಂಡಿವೆ. ಸುಮಾರು 11 ಯಾಗ ಕುಂಡಗಳಲ್ಲಿ 1.25 ಲಕ್ಷ "ಆಹುತಿ'(ಪ್ರಾರ್ಥನೆ) ಯನ್ನು ಪುರೋಹಿತರು ನೆರವೇರಿಸುತ್ತಿದ್ದಾರೆ. ಶನಿವಾರ ಬೆಳಿಗ್ಗೆನಿಂದ ಈ ಯಾಗ ಆರಂಭಗೊಂಡಿದೆ.
84ರ ಹರೆಯದ ಭಾರತೀಯ ಜನತಾ ಪಕ್ಷದ ಹಿರಿಯ ನೇತಾರ ಅಟಲ್ ಬಿಹಾರಿ ವಾಜಪೇಯಿ ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದು, ನವದೆಹಲಿಯ ಏಮ್ಸ್‌ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನೆಚ್ಚಿನ ನೇತಾರ ವಾಜಪೇಯಿ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಜಿಲ್ಲೆಯ ಹಲವಾರು ಕಡೆಗಳಲ್ಲಿ ಪೂಜೆ-ಪುನಸ್ಕಾರಗಳನ್ನು ನಡೆಸಲಾಗುತ್ತಿದೆ. |