ಮುಂದಿನ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಭಾರತೀಯ ಜನತಾ ಪಕ್ಷ ಮತ್ತೆ ರಾಮ ಮಂದಿರವನ್ನು ತನ್ನ ಅಜೆಂಡಾವನ್ನಾಗಿ ಮಾಡಿಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಬಹುಮತದಿಂದ ಆರಿಸಿದ್ದೇ ಆದಲ್ಲಿ ರಾಮಮಂದಿರವನ್ನು ನಿರ್ಮಾಣ ಖಚಿತ ಎಂದು ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಘೋಷಿಸಿದ್ದಲ್ಲದೆ, ರಾಮಮಂದಿರದ ವಿಷಯದಲ್ಲಿನ ಬಿಜೆಪಿ ನಂಬಿಕೆಯನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.ಎಲ್ಲಿಯವರೆಗೆ ರಾಮಜನ್ಮಭೂಮಿಯ ಸವಾಲು ನಮ್ಮ ಮುಂದಿರುತ್ತದೋ ಅಲ್ಲಿಯವರೆಗೆ ಭಾರತೀಯ ಜನತಾಪಕ್ಷದ ನಂಬಿಕೆಯನ್ನು ಕಳಚಲು ಸಾಧ್ಯವಿಲ್ಲ ಎಂದು ನಾಗಪುರದಲ್ಲಿ ಶನಿವಾರದಿಂದ ಆರಂಭವಾಗಿರುವ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಾಜನಾಥ್ ಸಿಂಗ್ ಅವರು ರಾಮಜನ್ಮಭೂಮಿಯ ಬಗ್ಗೆ ಬಿಜೆಪಿ ನಿಲುವನ್ನು ಸ್ಪಷ್ಟಪಡಿಸುತ್ತಿದ್ದಂತೆಯೇ ಕಾರ್ಯಕಾರಣಿ ಸಭೆಯಲ್ಲಿ ನೆರೆದಿದ್ದ ಸಾವಿರಾರು ಮಂದಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು 'ಜೈ ಶ್ರೀರಾಮ್'ಎಂಬ ಘೋಷಣೆ ಮೂಲಕ ಸ್ವಾಗತಿಸಿದರು.ಅಯೋಧ್ಯೆ, ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ಜಾರಿ ಮತ್ತು ಸಮಾನ ನಾಗರಿಕ ಸಂಹಿತೆಯ ಅಜೆಂಡಾದ ಮೂಲಕವೇ ಭಾರತೀಯ ಜನತಾಪಕ್ಷ 1998ರಲ್ಲಿ ಮೈತ್ರಿಕೂಟಗಳ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆಗೆ ಏರಿತ್ತು. ಇದೀಗ ಮುಂದಿನ ಲೋಕಸಭೆ ಚುನಾವಣೆಗೂ ಅಯೋಧ್ಯೆ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿರುವುದು ಸಿಂಗ್ ಹೇಳಿಕೆಯೇ ಸಾಕ್ಷಿಯಾಗಿದೆ.ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆತಲ್ಲಿ ರಾಮಮಂದಿರ ನಿರ್ಮಾಣ ಖಚಿತ, ಅಲ್ಲದೇ ಹಲವಾರ ಕ್ಲಿಷ್ಟ ವಿವಾದಗಳನ್ನು ಬಗೆಹರಿಸುವ ಭರವಸೆಯನ್ನೂ ರಾಜ್‌ನಾಥ್ ಸಿಂಗ್ ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ. |