ಕೇರಳದ ಸಿಪಿಎಂ ಶಾಸಕರ ಪುತ್ರಿಯನ್ನು ಅನ್ಯಕೋಮಿನ ಆಕೆಯ ಗೆಳೆಯನೊಂದಿಗೆ ಅಪಹರಿಸಿರುವ ಪ್ರಕರಣವೂ ರಾಜಕೀಯ ಬಣ್ಣ ಪಡೆದುಕೊಳ್ಳತೊಡಗಿದ್ದು, ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ಕೇಂದ್ರೀಯ ನಾಯಕರು, ಎಡಪಂಥೀಯ ಮುಖಂಡರು ಹರಿಹಾಯ್ದಿದ್ದಾರೆ.
ಇತ್ತೀಚೆಗಷ್ಟೇ ಪಬ್‌ನಲ್ಲಿ ನಡೆದ ದಾಳಿ ಪ್ರಕರಣವು ದೇಶಾದ್ಯಂತ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವಂತೆಯೇ, ಶುಕ್ರವಾರ ನಡೆದ ಹೊಸ ಘಟನೆಯು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಣುಕಾ ಚೌಧುರಿಯನ್ನು ಕೆರಳಿಸಿದ್ದು, "ತಾಲಿಬಾನೀಕರಣ" ನಡೆಯುತ್ತಿರುವ ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದುಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ರಾಜ್ಯ ಸರಕಾರಕ್ಕೆ ಹಿಡಿತ ಇಲ್ಲ, ತಾಲಿಬಾನೀಕರಣ ನಡೆಯುತ್ತಿದೆ. ಹಿಂದೂ ಹುಡುಗಿಯೊಬ್ಬಳು ಮುಸ್ಲಿಂ ಹುಡುಗನೊಬ್ಬನ ಜತೆ ಮಾತುಕತೆಯಾಡದಂತಹ ಕೋಮು ಸಂಬಂಧಿತ ವಿಭಜನೆಯ ಪರಿಸ್ಥಿತಿ ಇದೆ ಅಲ್ಲಿ. ಇದು ತೀರಾ ಅಪಾಯಕಾರಿ ಎಂದು ಸಚಿವೆ ಪ್ರತಿಕ್ರಿಯಿಸಿದ್ದಾರೆ.
ಮಂಜೇಶ್ವರದ ಶಾಸಕ ಸಿ.ಕೆ.ಕುಂಞಂಬು ಅವರ ಪುತ್ರಿಯು ತನ್ನ ಮುಸ್ಲಿಂ ಗೆಳೆಯನೊಬ್ಬನ ಜೊತೆ ಮಂಗಳೂರು ಸಮೀಪ ಪ್ರಯಾಣಿಸುತ್ತಿದ್ದಾಗ ಅವರಿಬ್ಬರನ್ನೂ ಅಲ್ಪ ಕಾಲ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಇಬ್ಬರನ್ನು ಬಂಧಿಸಲಾಗಿದೆ. |