ಕಳೆದ ವರ್ಷ ನವೆಂಬರ್‌ನಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿ ಕುರಿತಂತೆ ಪಾಕಿಸ್ತಾನ ಮಂಗಳವಾರದೊಳಗೆ ಪ್ರತಿಕ್ರಿಯೆ ನೀಡುವ ಬಗ್ಗೆ ಸಂಶಯ ಇರುವುದಾಗಿ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಮುಂಬೈ ದಾಳಿ ಕುರಿತಂತೆ ಭಾರತಕ್ಕೆ ಮಂಗಳವಾರದೊಳಗೆ ಮಾಹಿತಿ ನೀಡಲಾಗುವುದು ಎಂದು ಪಾಕ್ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಮುಖರ್ಜಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ದಾಳಿಯ ಕುರಿತ ತನಿಖೆ ಪೂರ್ಣಗೊಂಡಿರುವುದಾಗಿ ತಿಳಿಸಿದ್ದ ಗಿಲಾನಿ, ಮಾಹಿತಿಯನ್ನು ಭಾರತ ಹಾಗೂ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಸೋಮವಾರ ಅಥವಾ ಮಂಗಳವಾರ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದರು.
ವಾಣಿಜ್ಯ ನಗರದ ಮೇಲೆ ನಡೆದ ದಾಳಿಯ ಹಿಂದೆ ಪಾಕ್ ಮೂಲಕ ಉಗ್ರಗಾಮಿ ಸಂಘಟನೆಗಳ ಶಾಮೀಲಾತಿ ಇರುವ ಭಾರತ ಮಾಹಿತಿಯನ್ನು ನೀಡಿತ್ತು. ಆದರೆ ಪಾಕಿಸ್ತಾನ ಭಾರತ ನೀಡಿರುವ ಪುರಾವೆ ಬಗ್ಗೆ ತನಿಖೆ ನಡೆಸಿ ಹತ್ತು ದಿನದೊಳಗಾಗಿ ಪ್ರತಿಕ್ರಿಯೆ ನೀಡುವುದಾಗಿ ಭರವಸೆ ನೀಡಿತ್ತು.
ಆದರೆ ಪಾಕ್ ನೀಡಿದ ಗಡುವು ಮುಕ್ತಾಯಗೊಂಡಿದ್ದರು ಕೂಡ ಈವರೆಗೂ ಯಾವುದೇ ಮಾಹಿತಿಯಾಗಲಿ, ಆರೋಪಿಗಳನ್ನು ಶಿಕ್ಷಿಸುವ ಬಗ್ಗೆ ಚಕಾರ ಎತ್ತದೆ ಮೀನಮೇಷ ಎಣಿಸುತ್ತಿದೆ. |