ನಿವೃತ್ತ ಯೋಧರ 'ಒಂದೇ ದರ್ಜೆ, ಒಂದೇ ಪಿಂಚಣಿ' ಬೇಡಿಕೆಯನ್ನು ಸರ್ಕಾರ ನಿರಾಕರಿಸಿರುವ ಹಿನ್ನೆಲೆಯಲ್ಲಿ, ಅನೇಕ ಮಾಜಿ ಅಧಿಕಾರಿಗಳು ಮತ್ತು ಯೋಧರು ಭಾನುವಾರ ತಮ್ಮ ಶೌರ್ಯ ಪದಕಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ. ಸುಮಾರು 300 ಸಾಮಾನ್ಯ ದರ್ಜೆಯ ಅಧಿಕಾರಿಗಳು 10,000 ಅಧಿಕಾರಿಗಳು ಮತ್ತು ಯೋಧರ ಜತೆ ಸರ್ಕಾರಕ್ಕೆ ತಮ್ಮ ಪದಕಗಳನ್ನು ಹಿಂತಿರುಗಿಸಲು ನಿರ್ಧರಿಸಿದರು.
'ನಮ್ಮ ಮೇಲೆ ಯಾವುದೇ ಗೌರವವು ಸರ್ಕಾರಕ್ಕೆ ಇಲ್ಲದಿರುವಾಗ ನಾವು ಪದಕಗಳನ್ನು ಏಕೆ ಇಟ್ಟುಕೊಳ್ಳಬೇಕು?'ಎಂದು ಭಾರತೀಯ ನಿವೃತ್ತ ಯೋಧರ ಆಂದೋಳನದ ಉಪಾಧ್ಯಕ್ಷ ಮೇ.ಜ. ಸತ್ಬೀರ್ ಸಿಂಗ್(ನಿವೃತ್ತ) ಹೇಳಿದ್ದಾರೆ. ಪ್ರತಿಭಟನಾನಿರತ ಮಾಜಿ ಯೋಧರು ಇಲ್ಲಿನ ಜಂತರ್‌ಮಂತರ್‌ನಲ್ಲಿ ಸೇರಿ ಚೀಲಗಳಲ್ಲಿ ತಮ್ಮ ಪದಕಗಳನ್ನು ಪ್ಯಾಕ್ ಮಾಡಿ ಅದನ್ನು ರಾಷ್ಟ್ರಪತಿಗಳ ವಶಕ್ಕೆ ಒಪ್ಪಿಸಲಿದ್ದಾರೆ.
ರಾಷ್ಟ್ರಪತಿಯವರು ರಾಜಧಾನಿಯಲ್ಲಿ ಇಲ್ಲದಿರುವುದರಿಂದ ರಾಷ್ಟ್ರಪತಿ ಭವನದಲ್ಲಿ ಹಿರಿಯ ಅಧಿಕಾರಿಗೆ ಪದಕಗಳನ್ನು ಹಸ್ತಾಂತರಿಸಲಾಗುವುದು ಎಂದು ಸಿಂಗ್ ಹೇಳಿದರು.ಪದಕಗಳ ಸಾಮೂಹಿಕ ವಾಪಸಾತಿಯ ಜತೆ ನಿವೃತ್ತ ಯೋಧರು ಜಂತರ್‌ಮಂತರ್‌ನಿಂದ 3 ಕಿಮೀ ಪ್ರತಿಭಟನಾ ಮೆರವಣಿಗೆ ಹೊರಟು ಪುನಃ ಅಲ್ಲಿಗೇ ವಾಪಸಾಗಲಿದ್ದಾರೆ. ಕಳೆದ ಡಿ.16ರಿಂದ ನಿವೃತ್ತ ಯೋಧರ ಆಂದೋಳನದ ಸದಸ್ಯರು ಜಂತರ್ ಮಂತರ್‌ನಲ್ಲಿ ರಿಲೆ ಉಪವಾಸ ನಿರಶನ ಕೈಗೊಂಡಿದ್ದಾರೆ.
ಒಂದೇ ದರ್ಜೆಯ ಅಧಿಕಾರಿಗಳಿಗೆ ಮತ್ತು ಯೋಧರಿಗೆ ಒಂದು ರ‌್ಯಾಂಕ್, ಒಂದು ಪಿಂಚಣಿ' ಒದಗಿಸಲು ಪರಿಶೀಲನೆ ನಡೆಸಿಲ್ಲ ಎಂದು ಕಳೆದ ಸಂಸತ್ ಅಧಿವೇಶನದಲ್ಲಿ ಸರ್ಕಾರ ಸ್ಪಷ್ಟಪಡಿಸಿತ್ತು. ವೇತನ ಆಯೋಗ ಸೇನಾಪಡೆಗಳು ಮತ್ತು ಭದ್ರತಾ ಸಿಬ್ಬಂದಿಯ ವೇತನವನ್ನು ಪ್ರತಿ 10 ವರ್ಷಗಳಿಗೆ ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಆಯಾ ಆಯೋಗದ ವೇತನ ಅನುಷ್ಠಾನಕ್ಕೆ ಮುಂಚೆ ನಿವೃತ್ತರಾದವರ ಪಿಂಚಣಿಯಲ್ಲಿ ತೀವ್ರ ಅಂತರ ಕಂಡುಬಂದಿದೆ. ಒಂದೇ ದರ್ಜೆಯ ನಿವೃತ್ತ ಯೋಧರು ವಿವಿಧ ಮೊತ್ತದ ಪಿಂಚಣಿ ಪಡೆಯುತ್ತಿರುವುದಕ್ಕೆ ಲಕ್ಷಾಂತರ ಮಾಜಿ ಯೋಧರು ದೇಶಾದ್ಯಂತ ವಿರೋಧ ವ್ಯಕ್ತಪಡಿಸಿದ್ದರು.
|