ರೈಲುಗಳಲ್ಲಿ ಕಾದಿರಿಸಿದ ಹವಾನಿಯಂತ್ರಿತ ಬೋಗಿಗಳ ಪ್ರಯಾಣಿಕರ ಸಹಿತ ಎಲ್ಲ ಪ್ರಯಾಣಿಕರ ಲಗೇಜ್ ರಕ್ಷಣೆಗೆ ವಿಫಲವಾಗಿರುವ ರೈಲ್ವೆ ಇಲಾಖೆಯನ್ನು ಸುಪ್ರೀಂಕೋರ್ಟ್ ಭಾನುವಾರ ತರಾಟೆಗೆ ತೆಗೆದುಕೊಂಡಿದೆ. ರೈಲ್ವೆ ಪ್ರಯಾಣಿಕರನ್ನು ಕಳ್ಳರು ಮತ್ತು ದರೋಡೆಕೋರರ ಕೃಪೆಯಲ್ಲಿ ಬಿಡುವುದು ಸಾಧ್ಯವಿಲ್ಲ ಎಂದು ಹೇಳಿದ ಸುಪ್ರೀಂಕೋರ್ಟ್ ಅನಧಿಕೃತ ಪ್ರಯಾಣಿಕರು ಕಾದಿರಿಸಿದ ಬೋಗಿಗಳಲ್ಲಿ ಹೇಗೆ ಪ್ರವೇಶ ಮಾಡುತ್ತಾರೆನ್ನುವುದು ತಮಗೆ ತಿಳಿದಿರುವುದಾಗಿ ಬಿ.ಎನ್. ಅಗರವಾಲ್ ಮತ್ತು ಜಿ.ಎಸ್.ಸಿಂಗ್ವಿ ಅವರಿದ್ದ ನ್ಯಾಯಪೀಠ ರೈಲ್ವೆ ಪರ ವಕೀಲರಾದ ಅನ್ನಪೂರ್ನಿಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಕಾದಿರಿಸಿದ ಬೋಗಿಗಳಲ್ಲಿ ಅನಧಿಕೃತ ವ್ಯಕ್ತಿಗಳು ಪ್ರವೇಶಿಸಲು ಸಾಧ್ಯವಿಲ್ಲ ಎನ್ನುವ ಆಧಾರದ ಮೇಲೆ ಮಹಿಳಾ ಪ್ರಯಾಣಿಕೆ ಪಿಂಕಿ ಗುಪ್ತಾ ಅವರ ಲಗೇಜ್ ಕಳುವಾಗಿದ್ದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂಬ ನಿಲುವನ್ನು ರೈಲ್ವೆ ಪರ ವಕೀಲರು ಹೊಂದಿದ್ದು, ಪ್ರಯಾಣಿಕೆ ಸುಳ್ಳು ಹೇಳುತ್ತಿದ್ದಾರೆಂದು ಅವರು ಆರೋಪಿಸಿದ್ದರು. ಆದಾಗ್ಯೂ ಈ ವಾದವನ್ನು ಒಪ್ಪಿಕೊಳ್ಳದ ಪೀಠವು ಬೆಂಗಳೂರಿನ ಜಿಲ್ಲಾ ಗ್ರಾಹಕ ವೇದಿಕೆ ಮಹಿಳೆಗೆ ಪ್ರಕಟಿಸಿದ ಪರಿಹಾರದ ವಿರುದ್ಧ ನೈರುತ್ಯ ರೈಲ್ವೆ ಸಲ್ಲಿಸಿದ ವಿಶೇಷ ರಜಾ ಅರ್ಜಿಯನ್ನು ವಜಾ ಮಾಡಿತು.
ಬೆಂಗಳೂರಿನ ನಿವಾಸಿಯಾದ ಪಿಂಕಿ ನಿಜಾಮುದ್ದೀನ್‌ನಲ್ಲಿ ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ರೈಲನ್ನು ತನ್ನ 6 ವರ್ಷದ ಮತ್ತು 3 ವರ್ಷ ವಯಸ್ಸಿನ ಇಬ್ಬರು ಮಕ್ಕಳೊಂದಿಗೆ ಹತ್ತಿ ಪ್ರಯಾಣಿಸುತ್ತಿದ್ದಾಗ ಅವರ ಲಗೇಜ್ ಕಳವಾಗಿತ್ತು.
|