ಮುಂಬೈ ಭಯೋತ್ಪಾದನೆ ದಾಳಿಗಳ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ವಿಫಲವಾದ ಪಾಕಿಸ್ತಾನವನ್ನು ಪರೋಕ್ಷವಾಗಿ ಟೀಕಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯ ಗಾಂಧಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ರಾಷ್ಟ್ರಗಳಿಗೆ ತಕ್ಕಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ ಸೋನಿಯ ನವದೆಹಲಿಯ ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರ ಸಮಾವೇಶದಲ್ಲಿ ಮಾತನಾಡುತ್ತಾ, ಭಯೋತ್ಪಾದನೆ ಸವಾಲಾಗಿ ಪರಿಣಮಿಸಿದ್ದು, ಗಡಿಯಾಚೆಯಿಂದ ಪ್ರಚೋದಿಸುವ ಭಯೋತ್ಪಾದನೆಗೆ ಭಾರತ ತಕ್ಕಉತ್ತರ ನೀಡುವುದೆಂದು ಹೇಳಿದ್ದಾರೆ.
ಯಾವುದೇ ತಾರತಮ್ಯವಿಲ್ಲದೇ ಭಯೋತ್ಪಾದನೆ ನಿಗ್ರಹ ಪ್ರಕ್ರಿಯೆಯನ್ನು ಸರ್ಕಾರ ಮುಂದುವರಿಸುತ್ತದೆಂದು ಯುಪಿಎ ಅಧ್ಯಕ್ಷೆ ಹೇಳಿದರು. ಹಿಂದಿನ ಎನ್‌ಡಿಎ ಆಡಳಿತದ ವಿರುದ್ಧ ವಾಗ್ದಾಳಿ ಮಾಡಿದ ಕಾಂಗ್ರೆಸ್ ಅಧ್ಯಕ್ಷೆ ತಮ್ಮ ಸರ್ಕಾರ ಹಿಂದಿನ ಸರ್ಕಾರದ ರೀತಿಯಲ್ಲಿ ಭಯೋತ್ಪಾದನೆಯನ್ನು ಚುನಾವಣೆ ಅನುಕೂಲಕ್ಕೆ ಬಳಸಿಕೊಳ್ಳಲಿಲ್ಲ ಎಂದು ವ್ಯಂಗ್ಯವಾಡಿದರು.
ಸಮಾಜವನ್ನು ಒಡೆಯುವವರ ವಿರುದ್ಧ ಹೋರಾಟಕ್ಕೆ ಜನಾದೇಶ ನೀಡುವಂತೆ ಕರೆ ನೀಡಿದ ಸೋನಿಯ, ಪ್ರಸಕ್ತ ಯುಪಿಎ ಸರ್ಕಾರದಲ್ಲಿ ವಿಶ್ವಾಸ ಇರಿಸಿಕೊಳ್ಳುವಂತೆ ಪುನರುಚ್ಚರಿಸಿದರು. ಹಿರಿಯ ಅರ್ಥಶಾಸ್ತ್ರಜ್ಞರು ರಾಷ್ಟ್ರವನ್ನು ಗೌರವ ಮತ್ತು ಬುದ್ಧಿವಂತಿಕೆಯಿಂದ ಮುನ್ನಡೆಸಿದ್ದಾರೆಂದು ಮನಮೋಹನ್ ಸಿಂಗ್ ಅವರ ಆಡಳಿತವನ್ನು ಸೋನಿಯ ಶ್ಲಾಘಿಸಿದರು.
ತಾವು ಯಾವುದೇ ರಾಜ್ಯದ ವಿರುದ್ಧ ತಾರತಮ್ಯದ ಧೋರಣೆ ಅನುಸರಿಸಿಲ್ಲವೆಂದು ಯುಪಿಎ ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡರು. ಅಭಿವೃದ್ಧಿ ಚಟುವಟಿಕೆಗಳಿಗೆ ಎನ್‌ಡಿಎ ಆಳ್ವಿಕೆಯ ರಾಜ್ಯಗಳು ಸೇರಿದಂತೆ ಎಲ್ಲ ರಾಜ್ಯಗಳು ಅಭೂತಪೂರ್ವ ಆರ್ಥಿಕ ನೆರವು ಪಡೆದಿವೆ ಎಂದು ಹೇಳುತ್ತಾ, ಎನ್‌ಡಿಎ ಆಳ್ವಿಕೆಯಲ್ಲಿ ಆರೀತಿಯಿರಲಿಲ್ಲ ಎಂದು ಟೀಕಿಸಿದರು.
|