ಒಂದು ಕುಟುಂಬದ ವಂಶಪಾರಂಪರ್ಯ ಆಡಳಿತಕ್ಕೆ ಉತ್ತೇಜಿಸಲು ಪಿತೂರಿ ರೂಪಿಸಲಾಗಿದ್ದು, ದೇಶದ ಭವಿಷ್ಯಕ್ಕೆ ಅಪಾಯಕಾರಿಯಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾನುವಾರ ಗಾಂಧಿ-ನೆಹರು ಕುಟುಂಬದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ.
ಗಾಂಧಿ-ನೆಹರು ಕುಟುಂಬವನ್ನು ನೇರವಾಗಿ ಹೆಸರಿಸದೇ ಆರೋಪಿಸಿದ ಮೋದಿ, 'ಈ ಕುಟುಂಬದವರು 37 ವರ್ಷಗಳವರೆಗೆ ರಾಜ್ಯಭಾರ ಮಾಡಿದ್ದಾರೆ. ಕಳೆದ 5 ವರ್ಷಗಳ ಆಡಳಿತ ಕೂಡ ಲೆಕ್ಕಕ್ಕೆ ತೆಗೆದುಕೊಂಡರೆ 42 ವರ್ಷಗಳ ಆಳ್ವಿಕೆಯಾಗುತ್ತದೆ. ಮನಮೋಹನ್ ಸಿಂಗ್ 'ಅದೃಶ್ಯ' ಪ್ರಧಾನಮಂತ್ರಿಯಾಗಿ ಹೊಣೆಗಾರಿಕೆಯಿಲ್ಲದ ಅಧಿಕಾರ ನಡೆಸಿದರೆಂದು' ಅವರು ಆರೋಪಿಸಿದರು.
ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಬಿಜೆಪಿಯ ತಾರಾಮೆರುಗಿನ ಪ್ರಚಾರಕ ಮೋದಿ ಅಮೆರಿಕದಲ್ಲಿ ಬರಾಕ್ ಒಬಾಮಾ ಜಯಕ್ಕೆ ಹೊಸ ತಿರುವು ನೀಡಿ, ರಾಜಕೀಯದಲ್ಲಿ ಕೆಲವೇ ಕುಟುಂಬಗಳ ಕಪಿಮುಷ್ಠಿಯಿಂದ ಅಮೆರಿಕದ ಪೌರರು ಬೇಸತ್ತ ಫಲವೇ ಒಬಾಮಾ ವಿಜಯ ಎಂದು ವ್ಯಾಖ್ಯಾನಿಸಿದರು. 'ಎರಡು ಅವಧಿಗೆ ಸೀನಿಯರ್ ಬುಷ್, ಅದರ ಹಿಂದೆಯೇ ಎರಡು ಅವಧಿಗೆ ಬಿಲ್ ಕ್ಲಿಂಟನ್, ನಂತರ ಎರಡು ಅವಧಿಗೆ ಜೂನಿಯರ್ ಬುಷ್.
ಅದಾದ ಬಳಿಕ ಇನ್ನೊಬ್ಬರು ಕ್ಲಿಂಟನ್ ಬರುವ ಸಾಧ್ಯತೆಯನ್ನು ಅವರು ಬಿಚ್ಚಿಟ್ಟರು. ರಾಷ್ಟ್ರವು ಎರಡು ಕುಟುಂಬಗಳ ಹಿಡಿತದಲ್ಲಿವೆಂದು ಅಲ್ಲಿನ ಜನತೆ ಭಾವಿಸಿದ್ದರಿಂದ ಬದಲಾವಣೆ ಬಯಸಿದರೆಂದು ಮೋದಿ ಹೇಳಿದರು. ರಾಜಕೀಯ ನಿರ್ಣಯ ಕುರಿತ ಚರ್ಚೆಯಲ್ಲಿ ಮಾತನಾಡುತ್ತಿದ್ದ ಮೋದಿ, ಭಾರತದಲ್ಲಿ ಒಂದೇ ಒಂದು ಕುಟುಂಬ ಎಲ್ಲವನ್ನೂ ಹಾಳುಮಾಡಿತು ಎಂದು ಗಾಂಧಿ-ನೆಹರು ಕುಟುಂಬವನ್ನು ಅವರು ಟೀಕಿಸಿದರು.
|