ಸ್ಥಳೀಯರ ಸಹಕಾರವಿಲ್ಲದೆ ಭಯೋತ್ಪಾದಕರಿಗೆ ಮುಂಬೈ ದಾಳಿ ನಡೆಸಲು ಅಸಾಧ್ಯ ಎಂದಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಕೇಂದ್ರ ಯುಪಿಎ ಸರಕಾರವು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಅದನ್ನು ಮುಚ್ಚಿಡುತ್ತಿದೆ ಎಂದು ಆರೋಪಿಸಿದ್ದಾರೆ.
"ಸ್ಥಳೀಯರ ಸಹಕಾರವಿಲ್ಲದೆ ಇಂತಹ ದೊಡ್ಡ ಮಟ್ಟದ ದಾಳಿಗಳನ್ನು ನಡೆಸಲು ಸಾಧ್ಯವಿಲ್ಲ ಎನ್ನುವುದು ಸಾಮಾನ್ಯ ಜನರಿಗೂ ಗೊತ್ತು. ಆದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುವುದನ್ನು ತಡೆ ಹಿಡಿಯುವವರು ಯಾರು ಎಂದು ಬಹಿರಂಗವಾಗಬೇಕು. ಇದು ಕೇವಲ ವೋಟ್ ಬ್ಯಾಂಕ್ ರಾಜಕೀಯ" ಎಂದು ಮೋದಿ ಕಿಡಿ ಕಾರಿದ್ದಾರೆ. ನಾಗ್ಪುರದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡುತ್ತಾ ಯುಪಿಎ ಮೇಲೆ ದಾಳಿ ನಡೆಸಿದ ಅವರು, ವೋಟ್ ಬ್ಯಾಂಕ್ ರಾಜಕಾರಣಕ್ಕೆ ತಿಲಾಂಜಲಿಯಿಡುವಂತೆ ಆಗ್ರಹಿಸಿದರು.
"ಕಸಬ್ ವಿರುದ್ಧದ ಪುರಾವೆಯನ್ನು ಭಾರತದ ಯುಪಿಎ ಸರಕಾರವೇ ಸ್ವೀಕರಿಸುತ್ತಿಲ್ಲ ಎಂದಾದರೆ, ಪಾಕಿಸ್ತಾನ ಇದನ್ನು ಸ್ವೀಕರಿಸಲು ಹೇಗೆ ಸಾಧ್ಯ" ಎಂದು ಮೋದಿ ಪ್ರಶ್ನಿಸಿದ ವಿವಾದದ ಮೂರು ವಾರಗಳ ನಂತರ ಮತ್ತೊಂದು ಕಟುವಾದ ಹೇಳಿಕೆ ಬಂದಿದೆ.
ಇತ್ತೀಚಿನ ಹಲವಾರು ವರ್ಷಗಳಿಂದ ಭಾರತದಲ್ಲಿನ ಭಯೋತ್ಪಾನಾ ಚಟುವಟಿಕೆಗಳಿಗೆ ಸಾಕ್ಷಿಯಾದುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ಉಗ್ರರತ್ತ ನಮ್ಮ ಸಹನೆ ಹೆಚ್ಚುತ್ತಿದೆ ಎಂದರು. ಅಲ್ಲದೆ ಭಯೋತ್ಪಾದನೆಯನ್ನು ಪೋಷಿಸಲಾಗುತ್ತಿದೆ ಎಂದು ಯಾವುದೇ ವಿಚಾರವನ್ನು ಪ್ರಸ್ತಾಪಿಸದೆ ಮೋದಿ ಆರೋಪಿಸಿದ್ದಾರೆ.
ಮುಂಬೈ ದಾಳಿಯ ಸಂಬಂಧ ಪೂರಕ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲರಾಗಿರುವ ಪ್ರಧಾನಿ ಮನಮೋಹನ್ ಸಿಂಗ್ ಬದಲಿಗೆ ಜನತೆ ಅಡ್ವಾಣಿಯವರನ್ನು ಬಯಸುತ್ತಿದ್ದಾರೆ. ಪ್ರಬಲ ಹಾಗೂ ದೃಢವಾಗಿ ಆಡಳಿತ ನಡೆಸುವ ಅವರೇ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಮೋದಿ ಆಶಾವಾದ ವ್ಯಕ್ತಪಡಿಸಿದ್ದಾರೆ.
|