ಉದ್ಯಾನನಗರಿಯಲ್ಲಿ ಫೆ.11ರಿಂದ ಆರಂಭವಾಗಲಿರುವ ಬೃಹತ್ ಏರೋ ಇಂಡಿಯಾ-2009 ಪ್ರದರ್ಶನಕ್ಕೂ ಉಗ್ರರ ಕರಿನೆರಳು ಬಿದ್ದಿರುವುದಾಗಿ ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ.
ಸಿಲಿಕಾನ್ ಸಿಟಿಯಲ್ಲಿ ನಡೆಯಲ್ಲಿರುವ ಈ ಏರೋ ಇಂಡಿಯಾ ಪ್ರದರ್ಶನದಲ್ಲಿ ಭಾರತ ಸೇರಿದಂತೆ ಜಾಗತಿಕವಾಗಿ ಸುಮಾರು 592ಕಂಪೆನಿಗಳು ಭಾಗವಹಿಸುತ್ತಿವೆ. ಇದರಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಇಟಲಿ, ಜರ್ಮನಿ, ರಷ್ಯಾ ಹಾಗೂ ಇಸ್ರೇಲ್ ಒಳಗೊಂಡಂತೆ 25ದೇಶಗಳು ಪಾಲ್ಗೊಳ್ಳುತ್ತಿವೆ.
ಆದರೆ ಉಗ್ರರ ಹಿಟ್ ಲಿಸ್ಟ್‌ನಲ್ಲಿ ಏರೋ ಇಂಡಿಯಾ ಪ್ರದರ್ಶನ ಕೂಡ ಸೇರಿದೆ ಕೇಂದ್ರ ಗುಪ್ತಚರ ಹಾಗೂ ರಾಜ್ಯ ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ.
ಈ ನಿಟ್ಟಿನಲ್ಲಿ ಮುನ್ನಚ್ಚರಿಕೆ ಕ್ರಮವನ್ನು ಕೈಗೊಳ್ಳುವಂತೆ ಕೇಂದ್ರ ಗುಪ್ತಚರ ಇಲಾಖೆ ರಾಜ್ಯ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.
2007ರಲ್ಲಿ ನಡೆದ ಏರ್ ಇಂಡಿಯಾ ಪ್ರದರ್ಶನವನ್ನು ಅನುಮಾನಸ್ಪದ ವ್ಯಕ್ತಿಗಳು ವಿಡಿಯೋ ಮೂಲಕ ದಾಖಲಿಸಿಕೊಂಡು ಸಿಡಿ ರೂಪದಲ್ಲಿ ಪಾಕಿಸ್ತಾನಕ್ಕೆ ಸಾಗಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಅಲ್ಲದೆ, ಸಿಕ್ಕಿ ಬಿದ್ದಿರುವ ಉಗ್ರರು ನೀಡಿರುವ ಮಾಹಿತಿಗಳಲ್ಲೂ ಕೂಡ ಏರ್ ಶೋ ಟಾರ್ಗೆಟ್ ಇದೆ ಎಂಬ ಅಂಶ ಬಹಿರಂಗಗೊಂಡಿದೆ.
ಪ್ರಮುಖ ದೇಶಗಳು ಏರೋ ಇಂಡಿಯಾ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿರುವ ನಿಟ್ಟಿನಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿಯ ಯಲಹಂಕಾದ ವೈಮಾನಿಕ ನೆಲೆಯಲ್ಲಿ ಐದು ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನವನ್ನು ಬುಧವಾರ ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಉದ್ಘಾಟಿಸಲಿದ್ದಾರೆ. |