ಮುಂಬೈ ದಾಳಿಗೆ ಸಂಬಂಧಿಸಿದಂತೆ ತನಿಖೆಯನ್ನು ಪೂರ್ಣಗೊಳಿಸಬೇಕಾದರೆ ಭಾರತ ಮತ್ತಷ್ಟು ಮಾಹಿತಿಯನ್ನು ನೀಡಬೇಕಾದ ಅಗತ್ಯವಿದೆ ಎಂದು ಪಾಕ್ ಸೋಮವಾರ ಪ್ರತಿಕ್ರಿಯೆ ನೀಡಿದೆ.
ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅಧ್ಯಕ್ಷತೆಯಲ್ಲಿ ಇಂದು ಸಂಜೆ ನಡೆದ ಸಭೆಯಲ್ಲಿ ಕ್ಯಾಬಿನೆಟ್‌ನ ಹಿರಿಯ ಸಚಿವರು, ಆರ್ಮಿ ವರಿಷ್ಠ ಕಯಾನಿ ಅವರೊಂದಿಗೆ ದೀರ್ಘ ಸಮಾಲೋಚನೆ ನಡೆಸಿದ ಬಳಿಕ ಈ ಹೇಳಿಕೆಯನ್ನು ನೀಡಲಾಗಿದೆ.
ವಾಣಿಜ್ಯ ನಗರಿ ಮೇಲೆ ನಡೆದ ದಾಳಿಯ ವರದಿಯನ್ನು ಸೋಮವಾರ ಅಥವಾ ಮಂಗಳವಾರ ಬಹಿರಂಗಗೊಳಿಸಲಾಗುವುದು ಎಂದು ಯೂಸೂಫ್ ಶುಕ್ರವಾರ ತಿಳಿಸಿದ್ದರು.
ಕಳೆದ ವರ್ಷ ಮುಂಬೈಯಲ್ಲಿ ನವೆಂಬರ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ವಿದೇಶಿಯರು ಸೇರಿದಂತೆ 165ಮಂದಿ ಸಾವನ್ನಪ್ಪಿದ್ದರು.
ಮುಂಬೈ ದಾಳಿಯ ತನಿಖೆಗೆ ನಿಖರವಾದ ಪುರಾವೆ ಇಲ್ಲದಿದ್ದರೆ ತನಿಖೆಯನ್ನು ಪೂರ್ಣಗೊಳಿಸುವುದು ಕಷ್ಟ ಎಂದಿರುವ ಪಾಕ್, ತನಿಖೆಯನ್ನು ಮುಂದುವರಿಸುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೇ ಘಟನೆ ಕುರಿತಂತೆ ಭಾರತ ಕೆಲವು ಪ್ರಶ್ನೆಗಳಿಗೆ ಸಮರ್ಪಕವಾಗಿ ಪ್ರತಿಕ್ರಿಯೆ ನೀಡಿಲ್ಲ ಎಂದು ದೂರಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಾಥಮಿಕ ವರದಿಯ ಆಧಾರದ ಮೇಲೆ ಆರೋಪಿಗಳ ಮೇಲೆ ದೂರನ್ನು ದಾಖಲಿಸಲಾಗುವುದು. ಅಲ್ಲದೇ ಅವರಿಗೆ ಪಾಕಿಸ್ತಾನದ ಕಾನೂನಿನ್ವಯವೇ ಶಿಕ್ಷೆ ನೀಡಲು ಕ್ಯಾಬಿನೆಟ್ ನಿರ್ಣಯ ಕೈಗೊಂಡಿದೆ. ಭಾರತದ ಮೇಲೆ ನಡೆದಿರುವ ದಾಳಿಯ ಸಂಚು ಪಾಕ್‌ನಲ್ಲಿ ರೂಪುಗೊಂಡಿದ್ದಲ್ಲ ಎಂದು ಹೇಳಿರುವ ವರದಿ, ಅದು ದುಬೈ ಮತ್ತು ಯುರೋಪ್‌ನಲ್ಲಿ ಎಂಬುದಾಗಿ ಆರೋಪಿಸಿದೆ. |