ಶಸ್ತ್ರ ಸಜ್ಜಿತ ನಕ್ಸಲೀಯರ ಗುಂಪೊಂದು ಏಕಾಏಕಿ ದಾಳಿ ನಡೆಸುವ ಮೂಲಕ ಸುಮಾರು 10ಮಂದಿ ಪೊಲೀಸರು ಬಲಿಯಾಗಿರುವ ಘಟನೆ ಸೋಮವಾರ ಬಿಹಾರದ ನವಾಡಾ ಜಿಲ್ಲೆಯಲ್ಲಿ ನಡೆದಿದೆ.
ಅತ್ಯಾಧುನಿಕ ಆಯುಧವನ್ನು ಹೊಂದಿದ್ದ ಅಂದಾಜು 200ಮಂದಿಯಷ್ಟಿದ್ದ ಮಾವೋವಾದಿಗಳ ಗುಂಪು ರವಿದಾಸ್ ಜಯಂತಿ ಅಂಗವಾಗಿ ಸಂಘಟಿಸಿದ್ದ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಪರಿಣಾಮ, ಜಿಲ್ಲಾ ಪೊಲೀಸರು, ವಿಶೇಷ ಪಡೆಯ ಪೊಲೀಸರು ಹಾಗೂ ಬಿಹಾರ ಮಿಲಿಟರಿ ಪೊಲೀಸ್ ಸೇರಿದಂತೆ ಹತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಎಸ್‌ಎಪಿಯ ನಾಲ್ಕು ಜವಾನರು, ಸಬ್ ಇನ್ಸ್‌ಪೆಕ್ಟರ್ ರಾಮೇಶ್ವರ್ ರಾಮ್, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಐ.ಡಿ.ಸಿಂಗ್ ಮೃತಪಟ್ಟವರಲ್ಲಿ ಸೇರಿದ್ದಾರೆ. ಬಿಹಾರದಲ್ಲಿ ಈ ವರ್ಷ ಮಾವೋವಾದಿಗಳು ನಡೆಸಿದ ಬೃಹತ್ ದಾಳಿ ಇದಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾವೋವಾದಿಗಳು ಎಸ್‌ಎಲ್‌ಆರ್ ಸೇರಿದಂತೆ 11ರೈಫಲ್ಸ್‌ಗಳನ್ನು ಹೊತ್ತೊಯ್ದಿರುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಮಾವೋವಾದಿಗಳು ಸಾವು-ನೋವು ಅನುಭವಿಸಿದ್ದಾರೆಯೇ ಎಂಬುದು ತಿಳಿದು ಬಂದಿಲ್ಲ. |