ಕಳೆದ ವರ್ಷ ಅಮೆರಿಕ ನಡೆಸಿದ ದಾಳಿಯಲ್ಲಿ ಮೃತಪಟ್ಟನೆಂದು ನಂಬಲಾಗಿದ್ದ ಅಲ್ ಖಾಯಿದಾ ಸಂಘಟನೆಯ ಉಗ್ರಗಾಮಿಯೊಬ್ಬ ವೀಡಿಯೋದಲ್ಲಿ ಧುತ್ತನೆ ಕಾಣಿಸಿಕೊಂಡು, ಪಾಕಿಸ್ತಾನದ ಮೇಲೆ ಭಾರತವೇನಾದರೂ ದಾಳಿ ಮಾಡಿದಲ್ಲಿ, ಮುಂಬಯಿ ಮಾದರಿಯ ಮತ್ತಷ್ಟು ದಾಳಿಗಳನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾನೆ.
ಪಾಕಿಸ್ತಾನಕ್ಕೆ ದಾಳಿ ಮಾಡಿದಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಭಾರತವು ಅರಿತುಕೊಳ್ಳಬೇಕು ಎಂದು ಅಫ್ಘಾನಿಸ್ತಾನದಲ್ಲಿ ಅಲ್ ಖಾಯಿದಾ ಮಿಲಿಟರಿ ಕಮಾಂಡರ್ ಆಗಿರುವ ಮುಸ್ತಫಾ ಅಬು ಅಲ್ ಯಾಜಿದ್ (ಈತ ಅಲ್ ಖಾಯಿದಾದ ನಂ.2 ಅಯ್ಮಾನ್ ಅಲ್ ಜವಾಹಿರಿಯ ನಂತರದ ಸ್ಥಾನದಲ್ಲಿದ್ದಾನೆ) ಬಿಬಿಸಿಗೆ ಕಳುಹಿಸಿದ 20 ನಿಮಿಷಗಳ ವೀಡಿಯೋದಲ್ಲಿ ಹೇಳಿದ್ದಾನೆ. ಆತ ಅರಬ್ಬೀ ಭಾಷೆಯಲ್ಲಿ ವೀಡಿಯೋ ದಾಖಲಿಸಿದ್ದ.
ಯಾಜಿದ್ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಬೇಜೌರ್ ಬುಡಕಟ್ಟು ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಸತ್ತಿರಬಹುದು ಎಂದು ಪಾಕಿಸ್ತಾನಿ ಸೇನೆ ಹೇಳಿತ್ತು. 'ನಮ್ಮ ಮುಜಾಹಿದೀನ್‌ಗಳು ಅಫ್ಘಾನಿಸ್ತಾನದಲ್ಲಿ ರಷ್ಯನ್ನರಿಗೆ ಮಾಡಿದಂತೆ ಭಾರತೀಯ ಸೇನೆಯೂ ಧರಾಶಾಯಿಯಾಗುವಂತೆ ಮಾಡಲಿದ್ದಾರೆ. ಅವರು ನಿಮ್ಮ ಪ್ರಮುಖ ವಾಣಿಜ್ಯ ಕೇಂದ್ರಗಳನ್ನು ಗುರಿಯಾಗಿರಿಸಿ ಧ್ವಂಸ ಮಾಡಲಿದ್ದಾರೆ' ಎಂದೂ ಆತ ಎಚ್ಚರಿಸಿದ್ದಾನೆ.
ಮುಂಬಯಿ ದಾಳಿಯ ಬಳಿಕ ಉಗ್ರಗಾಮಿ ಸಂಘಟನೆಗಳನ್ನು ನಿಷೇಧಿಸಿದ ಕ್ರಮವನ್ನು ಖಂಡಿಸಿದ ಯಾಜಿದ್, ಸರಕಾರವನ್ನು ಉರುಳಿಸಿ ಮತ್ತು ಅಧ್ಯಕ್ಷ ಅಸಿಫ್ ಅಲಿ ಜರ್ದಾರಿಯನ್ನು ಕಿತ್ತೆಸೆಯುವಂತೆ ಪಾಕಿಸ್ತಾನಿ ಜನತೆಗೆ ಮನವಿ ಮಾಡಿಕೊಂಡಿದ್ದಾನೆ. |