ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಹಾಗೂ ಅವರ ಕುಟುಂಬದ ವಿರುದ್ಧ ಆದಾಯಕ್ಕಿಂತಲೂ ಹೆಚ್ಚಿನ ಸಂಪತ್ತು ಇರುವ ಬಗ್ಗೆ ಆರೋಪ ಹೊರಿಸಿದ್ದ ಸಿಬಿಐ ಇದೀಗ ಅವರನ್ನು ನಿರಪರಾಧಿ ಎಂದು ಸಾರುವ ವರದಿಯೊಂದನ್ನು ಸಿದ್ದಪಡಿಸಿದೆ.
ಮುಲಾಯಂ ಅಕ್ರಮ ಸಂಪತ್ತು ಪ್ರಕರಣದ ಕುರಿತು ಸಿಬಿಐ ತಯಾರಿಸಿದ ಪುನರ್ ಪರಿಶೀಲನಾ ವರದಿ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು, ಮುಲಾಯಂ ಸಿಂಗ್ ಅವರು ಕ್ಲೀನ್ ಚಿಟ್ ಪಡೆಯಲಿರುವರೇ ಎಂಬುದನ್ನು ಕಾದು ನೋಡಬೇಕಾಗಿದೆ.
ಕಾಂಗ್ರೆಸ್ ವರಿಷ್ಠೆ ಸೋನಿಯಾ ಅವರ ಬದ್ದ ವೈರಿಯಾಗಿದ್ದ ಮುಲಾಯಂ ಸಿಂಗ್ ಅವರು ಭಾರತ ಅಮೆರಿಕ ಪರಮಾಣು ಒಪ್ಪಂದ ಸಂದರ್ಭದಲ್ಲಿ ಕಾಂಗ್ರೆಸ್ ಜತೆ ಸಮಾಜವಾದಿ ಪಕ್ಷ ಕೈಜೋಡಿಸುವ ಮೂಲಕ ಆಪ್ತವಾಗಿದ್ದವು.
ಮುಲಾಯಂ ಅಕ್ರಮ ಸಂಪತ್ತು ಪ್ರಕರಣದ ಬಗ್ಗೆ ಸಿಬಿಐನ ಡಿಐಜಿ ತಿಲೋತ್ತಮ ವರ್ಮ ಅವರು ಕಳೆದ ಫೆ.2ರಂದು 17ಪುಟಗಳ ಪುನರ್ ಪರಿಶೀಲನಾ ವರದಿಯೊಂದನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದರು.
2007ರ ಅಕ್ಟೋಬರ್‌ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮುಲಾಯಂ ಹಾಗೂ ಅವರ ಕುಟುಂಬದವರ ವಿರುದ್ಧ ಮಾಡಲಾಗಿದ್ದ ಆರೋಪಗಳನ್ನು ಕೂಲಂಕಷವಾಗಿ ಪರಿಶೀಲಿಸಿದೆ ತಾವು ನಂಬಿದ್ದಾಗಿ ಸಿಬಿಐ ವರದಿಯಲ್ಲಿ ತಿಳಿಸಿದೆ. ಅರ್ಜಿಯಲ್ಲಿ ಯಾವ ಅಂಶವೂ ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಮುಲಾಯಂ ಅವರಿಗಿದೆ ಎಂಬುದನ್ನು ಸಾಬೀತುಪಡಿಸುವುದಿಲ್ಲ ಎಂದು ವರದಿಯಲ್ಲಿ ಹೇಳಿದೆ. |