ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಹಾಗೂ ಅವರ ಕುಟುಂಬದ ವಿರುದ್ಧ ಆದಾಯಕ್ಕಿಂತಲೂ ಹೆಚ್ಚಿನ ಸಂಪತ್ತು ಇರುವ ಬಗ್ಗೆ ಆರೋಪ ಹೊರಿಸಿದ್ದ ಸಿಬಿಐ ಇದೀಗ ಈ ಮೊದಲಿನ ನಿರ್ಧಾರವನ್ನು ಹಿಂಪಡೆಯುವ ಬಗ್ಗೆ ಕೋರಿದ್ದ ಸಿಬಿಐಗೆ ಮಂಗಳವಾರ ಸುಪ್ರೀಂಕೋರ್ಟ್ ಮಂಗಳಾರತಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಲಹೆಯನ್ನು ಕೇಳಿರುವ ಬಗ್ಗೆ ಸಿಬಿಐಯ ವಕೀಲರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ನ್ಯಾಯಪೀಠ, ಯಾವಾಗಿನಿಂದ ತಾವು ಕೇಂದ್ರ ಸರ್ಕಾರದ ಸಲಹೆ ಪಡೆಯಲು ಆರಂಭಿಸಿದ್ದೀರಿ? ನ್ಯಾಯಾಲಯದ ಸ್ಪಷ್ಟೀಕರಣವನ್ನು ಯಾಕೆ ನೀವು ಕೇಳುವುದಿಲ್ಲ ?ಎಂದು ಕಿಡಿಕಾರಿದೆ.
2007ರ ಮಾರ್ಚ್ 1ರಂದು ಮುಲಾಯಂ ಸಿಂಗ್ ಯಾದವ್ ಅವರ ವಿರುದ್ಧದ ಅಕ್ರಮ ಸಂಪತ್ತು ಆರೋಪದ ತನಿಖೆ ಮಾಡುವಂತೆ ಸಿಬಿಐಗೆ ಆದೇಶ ನೀಡಿತ್ತು.
ಮುಲಾಯಂ ಅಕ್ರಮ ಸಂಪತ್ತು ಪ್ರಕರಣದ ಬಗ್ಗೆ ಸಿಬಿಐನ ಡಿಐಜಿ ತಿಲೋತ್ತಮ ವರ್ಮ ಅವರು ಕಳೆದ ಫೆ.2ರಂದು 17ಪುಟಗಳ ಪುನರ್ ಪರಿಶೀಲನಾ ವರದಿಯೊಂದನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದರು.
2007ರ ಅಕ್ಟೋಬರ್‌ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮುಲಾಯಂ ಹಾಗೂ ಅವರ ಕುಟುಂಬದವರ ವಿರುದ್ಧ ಮಾಡಲಾಗಿದ್ದ ಆರೋಪಗಳನ್ನು ಕೂಲಂಕಷವಾಗಿ ಪರಿಶೀಲಿಸದೆ ತಾವು ನಂಬಿದ್ದಾಗಿ ಸಿಬಿಐ ವರದಿಯಲ್ಲಿ ತಿಳಿಸಿದೆ. ಅರ್ಜಿಯಲ್ಲಿ ಯಾವ ಅಂಶವೂ ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಮುಲಾಯಂ ಅವರಿಗಿದೆ ಎಂಬುದನ್ನು ಸಾಬೀತುಪಡಿಸುವುದಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದರು. |