ಉತ್ತರಪ್ರದೇಶ ಅಸೆಂಬ್ಲಿಯಲ್ಲಿ ಮಂಗಳವಾರ ಆರಂಭಗೊಂಡ ಬಜೆಟ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಟಿ.ವಿ.ರಾಜೇಶ್ವರ್ ಅವರು ಭಾಷಣ ಮಾಡುತ್ತಿದ್ದಂತೆಯೇ ಸಮಾಜವಾದಿ ಪಕ್ಷದ ಶಾಸಕರು ತೀವ್ರ ಕೋಲಾಹಲ ನಡೆಸುವ ಮೂಲಕ ಸದನ ರಣರಂಗವಾಗಿ ಮಾರ್ಪಟ್ಟ ಘಟನೆ ನಡೆಯಿತು.
ರಾಜ್ಯಪಾಲ ರಾಜೇಶ್ವರ್ ಅವರು ಅವರ ಭಾಷಣಕ್ಕೆ ಸಮಾಜವಾದಿ ಪಕ್ಷದ ಶಾಸಕರು ಅಡ್ಡಿಪಡಿಸಿದ್ದಲ್ಲದೇ, ರಾಜ್ಯಪಾಲರತ್ತ ಪೇಪರ್‌ಗಳನ್ನು ಎಸೆದರು, ಕಪ್ಪು ಬಾವುಟ ಪ್ರದರ್ಶಿಸಿದರು. ಕೆಲವು ಶಾಸಕರು ಟೇಬಲ್, ಕುರ್ಚಿ ಏರಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲರಾಗಿರುವ ಮಾಯಾವತಿ ಸರ್ಕಾರವನ್ನು ವಜಾಗೊಳಿಸುವಂತೆ ಧ್ವನಿ ಏರಿಸಿ ಆಗ್ರಹಿಸಿದರು.
ಅಲ್ಲದೇ ಉತ್ತರಪ್ರದೇಶದ ರಾಜ್ಯಪಾಲ ಮಾಯಾವತಿ ಅವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ, ಪಿಡಬ್ಲ್ಯುಡಿ ಇಂಜಿನಿಯರ್ ಔರಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯನ್ನು ರಾಜ್ಯಪಾಲರು ಯಾಕೆ ಪ್ರಶ್ನಿಸುತ್ತಿಲ್ಲ ಎಂದು ಸಮಾಜವಾದಿ ಪಕ್ಷದ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ರಾಜ್ಯಪಾಲರನ್ನು ವಜಾಗೊಳಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಸದ್ಯದ ಸ್ಥಿತಿಯಲ್ಲಿ ರಾಜ್ಯಪಾಲರ ವರ್ತನೆ ಬಿಎಸ್ಪಿ ರಾಜ್ಯಪಾಲರಂತೆ ಇದೆ. ರಾಜ್ಯಪಾಲರ ನಿರ್ದೇಶನದಲ್ಲಿ ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಕಾಂಗ್ರೆಸ್ ಮುಖಂಡರು ಗಣನೆಗೆ ತೆಗೆದುಕೊಂಡಿಲ್ಲ ಎಂದು ಅಮರ್ ಸಿಂಗ್ ಕಿಡಿಕಾರಿದ್ದಾರೆ. |