ಮುಂಬಯಿ ಮೇಲಿನ ದಾಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ಪತ್ರಿಕೆಗಳು ಮತ್ತಿತರ ಮಾಧ್ಯಮಗಳು ಹಾಗೂ ಯಾರ ಯಾರ ಮೂಲಕವೋ ಹೇಳಿಸುವ ಬದಲು, ನೇರವಾಗಿಯೇ ಅಭಿಪ್ರಾಯ ಮಂಡಿಸಿ ಎಂದು ಪಾಕಿಸ್ತಾನಕ್ಕೆ ಭಾರತ ತಾಕೀತು ಮಾಡಿದೆ.
ಪಾಕಿಸ್ತಾನದಿಂದ ನಮಗೆ ಗಂಟೆಗೊಂದರಂತೆ, ವಿಭಿನ್ನ ವೇದಿಕೆಗಳು, ವಿಭಿನ್ನ ಮಾತುಗಾರರ ಮೂಲಕ ಹೇಳಿಕೆಗಳು ಬರುತ್ತಿವೆ. ಯಾರನ್ನು ನಂಬಬೇಕು ಎಂಬುದು ನಮ್ಮ ಗೊಂದಲ ಎಂದು ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಅವರು ಢಾಕಾದಿಂದ ದೆಹಲಿಗೆ ಮರಳುತ್ತಿರುವ ಸಂದರ್ಭ ಸುದ್ದಿಗಾರರಿಗೆ ಹೇಳಿದ್ದಾರೆ.
ಭಾರತವು ತನಿಖೆ ನಡೆಸಿ ಒಪ್ಪಿಸಿದ ಸಾಕ್ಷ್ಯಾಧಾರಗಳ ಕಂತೆಗೆ ಪಾಕಿಸ್ತಾನದಿಂದ ಬರುತ್ತಿರುವ ಸುಳ್ಳಿನ ಕಂತೆಗಳ ಕುರಿತು ಕೇಳಿದಾಗ ಉತ್ತರಿಸುತ್ತಿದ್ದ ಮೆನನ್, ಊಹಾಪೋಹಗಳು, ಗಾಳಿಸುದ್ದಿಗಳು, ಯಾರ್ಯಾರ ಮೂಲಕವೋ ಬರುತ್ತಿರುವ ಪಾಕಿಸ್ತಾನಿ ಸುದ್ದಿಗಳಿಗೆ ಭಾರತವು ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ ಎಂದರು.
ನವೆಂಬರ್ ತಿಂಗಳಲ್ಲಿ ನಡೆದ ಮುಂಬಯಿ ದಾಳಿ ಪ್ರಕರಣದ ಕುರಿತು ಕೆಲವೇ ದಿನಗಳಲ್ಲಿ ತನ್ನ ತನಿಖಾ ವರದಿಯನ್ನು ಮಂಡಿಸುವುದಾಗಿ ಕಳೆದ ಎರಡಕ್ಕೂ ಹೆಚ್ಚು ತಿಂಗಳಿಂದ ಪಾಕಿಸ್ತಾನ ಹೇಳುತ್ತಲೇ ಬಂದಿದೆ. "ಅವರಿಗೇನಾದರೂ ಹೇಳಿಕೆ ನೀಡಬೇಕಿದ್ದರೆ, ನೇರವಾಗಿ ನಮ್ಮನ್ನೇ ಸಂಪರ್ಕಿಸಲಿ" ಎಂದು ಮೆನನ್ ಪಾಕಿಸ್ತಾನಕ್ಕೆ ಆಗ್ರಹಿಸಿದ್ದಾರೆ. |