ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಅವರು ಚುನಾವಣಾ ಆಯುಕ್ತ ನವೀನ್ ಚಾವ್ಲಾ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಪತ್ರ ಬರೆದು ವಿವಾದಕ್ಕೀಡಾಗಿದ್ದರೆ, ಇದೀಗ ಚಾವ್ಲಾ ಇನ್ನೊಂದು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಜೈಪುರ ಬಳಿ ಭೂಮಿಯನ್ನು ತನ್ನದಾಗಿಸಿಕೊಳ್ಳಲು ಚಾವ್ಲಾ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವರೆಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಜೈಪುರ ವಿಚಾರಣಾ ನ್ಯಾಯಾಲಯವೊಂದು ಆದೇಶಿಸಿದೆ.
2000ದಲ್ಲಿ ಜೈಪುರದ ಸಂಗನೆರ್ ವಿಮಾನ ನಿಲ್ದಾಣದ ಬಳಿ 6ಎಕರೆ ಭೂಮಿಯನ್ನು ಅದರ ನಿಜವಾದ ಮೌಲ್ಯಕ್ಕಿಂತಲೂ ಕಡಿಮೆ ದರದಲ್ಲಿ ಖರೀದಿಸಲು ಎರಡು ಖಾಸಗಿ ದತ್ತಿಗಳನ್ನು ಚಾವ್ಲಾ ಸೃಷ್ಟಿಸಿದ್ದಾರೆನ್ನಲಾಗಿದೆ.
ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತನಿಖೆ ನಡೆಸಿ ಮಾರ್ಚ್ 16ರಂದು ವರದಿ ಸಲ್ಲಿಸುವಂತೆ ನ್ಯಾಯಾಲಯ ಹೇಳಿದೆ ಎಂದು ವಕೀಲ ಕೈಲಾಸ್‌ನಾಥ್ ಭಟ್ ತಿಳಿಸಿದ್ದಾರೆ.
ಗೋಪಾಲಸ್ವಾಮಿ ಪತ್ರ ಕುರಿತಂತೆ ಕಾನೂನು ಸಚಿವಾಲಯ ತನ್ನ ಅಭಿಪ್ರಾಯವನ್ನು ಸಿದ್ದಪಡಿಸಿದೆಯಾದರು ಲೋಕಸಭೆ ಚುನಾವಣೆ ವೇಳೆಗೆ ಅದನ್ನು ಬಹಿರಂಗ ಪಡಿಸಲಿರುವುದಾಗಿ ತಿಳಿದು ಬಂದಿದೆ. |