ಕೊಲೆ ಸಂಚಿನ ಆಪಾದನೆ ಮೇರೆಗೆ ಕೇಂದ್ರ ಸಚಿವ ಮಹಾವೀರ್ ಪ್ರಸಾದ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಇದರಿಂದ ಕೇಂದ್ರ ಸರ್ಕಾರ ಮತ್ತೊಂದು ಮುಖಭಂಗ ಅನುಭವಿಸಿದೆ.
ಕೇಂದ್ರದ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವರ ವಿರುದ್ಧ ಕೊಲೆ ಸಂಚು ನಡೆಸಿದ ಆಪಾದನೆ ಮೇರೆಗೆ ಐಪಿಸಿ ಸೆಕ್ಷನ್ 120ಬಿ ಪ್ರಕಾರ ಪ್ರಕರಣ ದಾಖಲಿಸುವಂತೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿದ್ದು, ಆ ನಿಟ್ಟಿನಲ್ಲಿ ಗಾಘಾ ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಾತ್ರಿ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಮಿಶ್ರಾ ತಿಳಿಸಿದ್ದಾರೆ.
ಅಲ್ಲದೇ ಉಜ್ಜಾರ್‌ಪುರ್ ಗ್ರಾಮದ ಮುಖಂಡ ರಾಜೇಶ್ ಸಿಂಗ್ ಹಾಗೂ ಗೌರಿ ಶಂಕರ್ ಎಂಬಿಬ್ಬರ ಮೇಲೂ ಐಪಿಸಿ ಸೆಕ್ಷನ್ 302(ಕೊಲೆ), 201(ಸುಳ್ಳು ಮಾಹಿತಿ), 504(ಸಾರ್ವಜನಿಕ ಸ್ಥಳದಲ್ಲಿ ಅಪಮಾನ) ಹಾಗೂ 506ರ ಪ್ರಕಾರ ದೂರು ದಾಖಲಿಸಿಲಾಗಿದೆ.
ಸಚಿವರ ಊರಾದ ಉಜ್ಜಾರ್‌ಪುರ್ ನಿವಾಸಿ ಸುಭಾವತಿ ಎಂಬಾಕೆ ತನ್ನ ಗಂಡನ ಕೊಲೆ ಸಂಚಿನ ಹಿಂದೆ ಇವರೆಲ್ಲ ಭಾಗಿಯಾಗಿದ್ದಾರೆಂದು ಆರೋಪಿಸಿ ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರಿದ್ದರು. ತನ್ನ ಗಂಡನ ಕೊಲೆ ಸಂಚಿನ ಹಿಂದೆ ಸಚಿವರ ಕೈವಾಡ ಇರುವುದಾಗಿಯೂ ಆಕೆ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳೀಯ ನ್ಯಾಯಲಯ ಸುಭಾವತಿಯ ಅರ್ಜಿಯನ್ನು ತಿರಸ್ಕರಿಸಿದ ನಂತರ ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದರು. |