ಮುಂಬೈ ಭಯೋತ್ಪಾದನಾ ದಾಳಿ ಕುರಿತು ಪ್ರತಿಕ್ರಿಯೆ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವ ಪಾಕಿಸ್ತಾನ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆಯನ್ನೇ ಸಮರ್ಥಿಸಲು ಹೊರಟಿರುವ ಬೆನ್ನಲ್ಲೇ ಮೋದಿ ಇದೀಗ ತನ್ನ ರಾಗ ಬದಲಿಸಿದ್ದಾರೆ.ಸ್ಥಳೀಯರ ಸಹಕಾರವಿಲ್ಲದೆ ಭಯೋತ್ಪಾದಕರಿಗೆ ಮುಂಬೈ ದಾಳಿ ನಡೆಸಲು ಅಸಾಧ್ಯ ಎಂದು ಆರೋಪಿಸಿದ್ದ ಮೋದಿ, ಕೇಂದ್ರದ ಯುಪಿಎ ಸರಕಾರವು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಅದನ್ನು ಮುಚ್ಚಿಡುತ್ತಿದೆ ಎಂದು ಹೇಳಿದ್ದರು. ಆದರೆ ತಾನು ಆ ರೀತಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಸಮಜಾಯಿಷಿ ನೀಡಿರುವ ಅವರು, ಭಾರತದ ನೆಲದಲ್ಲಿ ಪಾಕ್ ನಡೆಸಿರುವ ಭಯೋತ್ಪಾದನಾ ದಾಳಿಯನ್ನು ಸ್ಥಳೀಯ ಕೆಲವು ಗುಂಪು ಅದರಿಂದ ಸಂತೋಷಗೊಂಡಿತ್ತು ಎಂದಿದ್ದೆ. ಅಲ್ಲದೇ ಅವರು ಸ್ಥಳೀಯ ನೆಟ್‌ವರ್ಕ್ ಹೊಂದಿದ್ದವರಾಗಿದ್ದಾರೆ ಎಂದು ಹೇಳಿದ್ದೇನೆ. ನಾನು ಹೇಳಿರುವ ಹೇಳಿಕೆಯನ್ನು ತಿರುಚಿ ಹೇಳಲಾಗಿದೆ ಎಂದು ಟಿವಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ." ಸ್ಥಳೀಯರ ಸಹಕಾರವಿಲ್ಲದೆ ಇಂತಹ ದೊಡ್ಡ ಮಟ್ಟದ ದಾಳಿಗಳನ್ನು ನಡೆಸಲು ಸಾಧ್ಯವಿಲ್ಲ ಎನ್ನುವುದು ಸಾಮಾನ್ಯ ಜನರಿಗೂ ಗೊತ್ತು. ಆದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುವುದನ್ನು ತಡೆ ಹಿಡಿಯುವವರು ಯಾರು ಎಂದು ಬಹಿರಂಗವಾಗಬೇಕು. ಇದು ಕೇವಲ ವೋಟ್ ಬ್ಯಾಂಕ್ ರಾಜಕೀಯ" ಎಂದು ಮೋದಿ ನಾಗ್ಪುರದಲ್ಲಿ (ಫೆ.8) ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಹರಿಹಾಯ್ದಿದ್ದರಲ್ಲದೆ, ಯುಪಿಎ ಮೇಲೆ ವಾಗ್ದಾಳಿ ನಡೆಸಿದ ಅವರು, ವೋಟ್ ಬ್ಯಾಂಕ್ ರಾಜಕಾರಣಕ್ಕೆ ತಿಲಾಂಜಲಿಯಿಡುವಂತೆ ಆಗ್ರಹಿಸಿದ್ದರು.ಮೋದಿಯ ಈ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಡುತ್ತಿದ್ದಂತೆಯೇ ಬಿಜೆಪಿ ಅದಕ್ಕೆ ತೇಪೆ ಹಚ್ಚುವ ವಿವರಣೆ ನೀಡಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಎ.ಆರ್.ಅಂತುಳೆ ಅವರು ನೀಡಿದ ಹೇಳಿಕೆಗೂ ತುಂಬಾ ವ್ಯತ್ಯಾಸ ಇದೆ. ಅಂತುಳೆ ಹೇಳಿಕೆ ಸಂಪೂರ್ಣ ತಪ್ಪು. ಮುಂಬೈಯ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇಲ್ಲ ಎಂಬುದು ಅಂತುಳೆ ಅವರ ಅಭಿಪ್ರಾಯವಾಗಿತ್ತು.ಆದರೆ ಮೋದಿ ಅವರು ಹೇಳಿದ್ದು, ಪಾಕ್ ಹೂಡಿರುವ ಸಂಚಿನ ಹಿಂದೆ ಸ್ಥಳೀಯರ ಬೆಂಬಲ ಇದೆ ಎಂಬುದಾಗಿತ್ತು ಎಂದು ಅರುಣ್ ಜೈಟ್ಲಿ ಮಂಗಳವಾರದಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಸಮರ್ಥನೆ ನೀಡಿದ್ದರು. |