ಸ್ಥಳೀಯರ ಸಹಕಾರವಿಲ್ಲದೆ ಭಯೋತ್ಪಾದಕರಿಗೆ ಮುಂಬೈ ದಾಳಿ ನಡೆಸಲು ಅಸಾಧ್ಯ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಕಿಡಿಕಾರಿದ್ದಾರೆ.ಮುಂಬೈ ದಾಳಿಯ ಕುರಿತಂತೆ ಪಾಕಿಸ್ತಾನ ಮತ್ತು ಮೋದಿ ಒಂದೇ ರಾಗ ಹಾಡುತ್ತಿದ್ದಾರೆ. ಹಾಗಾದರೆ ಮೋದಿ ಅವರಿಗೆ ಎಲ್ಲವೂ ತಿಳಿದಿದೆ ಎಂದ ಮೇಲೆ ಅವರಿಗೂ ಪಾಕಿಸ್ತಾನಕ್ಕೂ ಏನಾದರು ನಂಟು ಇದೆಯಾ ಅಂತ ಕೇಳಬೇಕಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ." ಸ್ಥಳೀಯರ ಸಹಕಾರವಿಲ್ಲದೆ ಇಂತಹ ದೊಡ್ಡ ಮಟ್ಟದ ದಾಳಿಗಳನ್ನು ನಡೆಸಲು ಸಾಧ್ಯವಿಲ್ಲ ಎನ್ನುವುದು ಸಾಮಾನ್ಯ ಜನರಿಗೂ ಗೊತ್ತು. ಆದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುವುದನ್ನು ತಡೆ ಹಿಡಿಯುವವರು ಯಾರು ಎಂದು ಬಹಿರಂಗವಾಗಬೇಕು. ಇದು ಕೇವಲ ವೋಟ್ ಬ್ಯಾಂಕ್ ರಾಜಕೀಯ" ಎಂದು ಮೋದಿ ನಾಗ್ಪುರದಲ್ಲಿ (ಫೆ.8) ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಹರಿಹಾಯ್ದಿದ್ದರಲ್ಲದೆ, ಯುಪಿಎ ಮೇಲೆ ದಾಳಿ ನಡೆಸಿದ ಅವರು, ವೋಟ್ ಬ್ಯಾಂಕ್ ರಾಜಕಾರಣಕ್ಕೆ ತಿಲಾಂಜಲಿಯಿಡುವಂತೆ ಆಗ್ರಹಿಸಿದ್ದರು. ವಾಣಿಜ್ಯ ನಗರಿ ಮೇಲೆ ನಡೆದ ದಾಳಿ ಕುರಿತಂತೆ ತಾನು ಮಂಗಳವಾರದೊಳಗೆ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದ ಪಾಕಿಸ್ತಾನ, ನಿನ್ನೆ ಸಂಜೆ ತನಿಖೆಗೆ ಭಾರತ ಮತ್ತಷ್ಟು ಪುರಾವೆ ಒದಗಿಸಬೇಕಾಗುತ್ತದೆ, ಅಲ್ಲದೇ ಮೋದಿ ಹೇಳಿಕೆಯಂತೆ, ಪಾಕ್ ಕೂಡ ಸ್ಥಳೀಯರ ನೆರವಿನಿಂದಲೇ ಘಟನೆ ಸಂಭವಿಸಿರಬಹುದು ಎಂದು ಎಡಬಿಡಂಗಿ ಹೇಳಿಕೆ ನೀಡಿತ್ತು.ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಏನಾದರು ಪ್ರತಿಕ್ರಿಯೆ ನೀಡಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈವರೆಗೂ ಅದಿಕೃತವಾಗಿ ಯಾವುದೇ ಪ್ರತಿಕ್ರಿಯೆಯನ್ನು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. |