ಮಾಯಾವತಿ ಸರ್ಕಾರದ ಕೈಗೊಂಬೆಯಾಗಿ ರಾಜ್ಯಪಾಲರು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಮಂಗಳವಾರ ಉತ್ತರ ಪ್ರದೇಶ ಅಸೆಂಬ್ಲಿಯಲ್ಲಿ ಕೋಲಾಹಲ ನಡೆದ ಬೆನ್ನಲ್ಲೇ ಅದರ ಮುಂದುವರಿದ ಚಾಳಿ ಎಂಬಂತೆ ಆಂಧ್ರದ ವಿಧಾನಸಭೆಯಲ್ಲಿ 'ಸತ್ಯಂ' ಪ್ರಕರಣ ಕೋಲಾಹಲ ಎಬ್ಬಿಸಿದ ಘಟನೆ ಬುಧವಾರ ನಡೆಯಿತು.
ಆಂಧ್ರದ ಅಸೆಂಬ್ಲಿಯಲ್ಲಿ ಇಂದು ಆರಂಭಗೊಂಡ ಅಧಿವೇಶನದಲ್ಲಿ ವಿರೋಧಪಕ್ಷದ ಶಾಸಕರು ಸತ್ಯಂನ ಪದಚ್ಯುತ ಮುಖ್ಯಸ್ಥ ರಾಮಲಿಂಗಾರಾಜು ಹಾಗೂ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ನಂಟು ಹೊಂದಿದ್ದಾರೆ ಎಂದು ಆರೋಪಿಸಿ ತೀವ್ರ ಕೋಲಾಹಲ ಎಬ್ಬಿಸಿದರು.
ಉತ್ತರಪ್ರದೇಶ ಅಸೆಂಬ್ಲಿಯಲ್ಲಿ ನಡೆದಂತೆಯೇ, ಇಲ್ಲಿಯೂ ಅಕ್ಷರಶಃ ಟಿಡಿಪಿ, ಟಿಆರ್‌ಎಸ್, ಶಾಸಕರು ಜಂಗಿಕುಸ್ತಿಗೆ ಇಳಿಯುವ ಮೂಲಕ ಸದನ ರಣರಂಗವಾಗಿತ್ತು, ಇದರಿಂದ ಆಕ್ರೋಶಗೊಂಡ ಸ್ಪೀಕರ್ ವಿರೋಧಪಕ್ಷದ ಎಲ್ಲಾ ಶಾಸಕರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಿರುವುದಾಗಿ ತಿಳಿಸಿದರು.
ರಾಷ್ಟ್ರಾದ್ಯಂತ ತೀವ್ರ ವಿವಾದ ಸೃಷ್ಟಿಸಿದ ಸತ್ಯಂ ಗೋಲ್‌ಮಾಲ್ ಪ್ರಕರಣದ ಕುರಿತು ವಿರೋಧ ಪಕ್ಷದ ಶಾಸಕರು ಆಡಳಿತರೂಢ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೇ ರಾಮಲಿಂಗಾರಾಜು ಹಾಗೂ ಮುಖ್ಯಮಂತ್ರಿಗಳ ನಡುವಿನ ನಂಟಿನ ಬಗ್ಗೆ ವಿವರಣೆ ನೀಡಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಪುತ್ರ ಜನಮೋಹನ್ ಅವರ ಸಾಕ್ಷಿ ದಿನಪತ್ರಿಕೆಗೆ ರಾಮಲಿಂಗಾರಾಜು ಅವರು ಆರ್ಥಿಕ ನೆರವು ಒದಗಿಸಿದ್ದಾರೆ ಎಂದು ವಿರೋಧ ಪಕ್ಷಗಳು ಈ ಸಂದರ್ಭದಲ್ಲಿ ಗಂಭೀರವಾಗಿ ಆರೋಪಿಸಿದವು.
ವಿರೋಧ ಪಕ್ಷಗಳು ಎತ್ತುವ ಯಾವುದೇ ವಿಚಾರಕ್ಕೂ ಮುಖ್ಯಮಂತ್ರಿಗಳು ಬಾಯ್ಬಿಡುತ್ತಿಲ್ಲ ಎಂದು ತೆಲುಗುದೇಶಂ ಪಕ್ಷದ ಹರೀಶ್ವರ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿ, ವಿರೋಧ ಪಕ್ಷದ ಶಾಸಕರನ್ನೇ ಸದನದಿಂದ ಹೊರಗಟ್ಟಲಾಗಿದೆ. ಆಂಧ್ರಪ್ರದೇಶದ ಇತಿಹಾಸದಲ್ಲೇ ಇಂತಹದ್ದೊಂದು ಘಟನೆ ನಡೆದಿಲ್ಲ ಎಂದು ಕಿಡಿಕಾರಿದರು.
ಸದನದ ಸ್ಪೀಕರ್ ಆಡಳಿತರೂಢ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ದೂರಿದ ರೆಡ್ಡಿ, ಸ್ಪೀಕರ್ ಕೆಲಸ ಆಡಳಿತರೂಢ ಪಕ್ಷಕ್ಕೆ ಮಾರ್ಗದರ್ಶನ ನೀಡುವುದಾಗಿದೆ, ಅದನ್ನು ಬಿಟ್ಟು ವಿರೋಧ ಪಕ್ಷದ ಸದಸ್ಯರನ್ನೇ ಸದನದಿಂದ ಹೊರಗಟ್ಟುತ್ತಾರೆ ಇದೆಂತಹಾ ನ್ಯಾಯ ಎಂದು ಪ್ರಶ್ನಿಸಿದ್ದಾರೆ. |