ರಾಷ್ಟ್ರದಾದ್ಯಂತ ತೀವ್ರ ವಿವಾದ ಹುಟ್ಟಿಸಿದ ರಿಜ್ವಾನೂರ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿ ಬುಧವಾರ ಕೋಲ್ಕತಾದ ಹೂಗ್ಲಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ರಿಜ್ವಾನೂರ್ ಹತ್ಯೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಸಾಹಯಕ ಪೊಲೀಸ್ ವರಿಷ್ಠಾಧಿಕಾರಿ ಅರಿಂದಮ್ ಮನ್ನಾ ಅವರನ್ನು ಕೊಲೆಗೈದು ಇಲ್ಲಿನ ರೈಲ್ವೆ ಹಳಿಯ ಮೇಲೆ ಎಸೆದು ಹೋಗಲಾಗಿತ್ತು ಎಂದು ಹೇಳಿದ್ದಾರೆ. ಆರಂಭದಿಂದಲೇ ಸಾಕಷ್ಟು ವಿವಾದ ಎಬ್ಬಿಸಿದ್ದ ಈ ಪ್ರಕರಣದ ಇದೀಗ ತನಿಖಾಧಿಕಾರಿ ಹತ್ಯೆಯಿಂದ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಂತಾಗಿದೆ.
ರಿಜ್ವಾನೂರ್ ರೆಹಮಾನ್ ಕೊಲೆ ಪ್ರಕರಣದ ಪ್ರಥಮ ತನಿಖಾಧಿಕಾರಿ ಮನ್ನಾ ಅವರಾಗಿದ್ದಾರೆ. ಅವರು ಫೆ.9ರಿಂದ ರಜೆಯ ಮೇಲೆ ತೆರಳಿದ್ದರು.
ಖ್ಯಾತ ಉದ್ಯಮಿ ಅಶೋಕ್ ತೋಡಿ ಅವರ ಪುತ್ರಿ ಪ್ರಿಯಾಂಕಳನ್ನು ಮದುವೆಯಾದ ನಂತರ, 2007ರ ಸೆಪ್ಟೆಂಬರ್ 21ರಂದು ಕಂಪ್ಯೂಟರ್ ಗ್ರಾಫಿಕ್ಸ್ ಡಿಸೈನರ್ ಆಗಿದ್ದ ರಿಜ್ವಾನೂರ್ ರೆಹಮಾನ್‌ನನ್ನು ಹತ್ಯೆಗೈದು ರೈಲ್ವೆ ಹಳಿಯ ಮೇಲೆ ಎಸೆದು ಹೋಗಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೂವರೆ ತಿಂಗಳ ಕಾಲ ಬಂಧನದಲ್ಲಿದ್ದ ಕೋಲ್ಕತಾದ ಉದ್ಯಮಿ ಅಶೋಕ್ ತೋಡಿ ಹಾಗೂ ಸಹೋದರ ಪ್ರದೀಪ್ ತೋಡಿಯನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಜನವರಿ 16ರಂದು ಆದೇಶ ನೀಡಿತ್ತು. |