ಮಾತೃಪಕ್ಷವಾದ ಸಿಪಿಐ(ಎಂ)ನಿಂದ ವಜಾಗೊಂಡಿರುವ ಸ್ಪೀಕರ್ ಸೋಮನಾಥ್ ಚಟರ್ಜಿ ಅವರು ಇದೀಗ ತಮ್ಮ 'ಕಟ್ಟಾ-ಮೀಟಾ'(ಸಿಹಿ-ಕಹಿ) ನೆನಪುಗಳಿಗೆ ಅಕ್ಷರ ರೂಪ ಕೊಡಲು ನಿರ್ಧರಿಸಿದ್ದಾರೆ.
ಲೋಕಸಭೆಯಲ್ಲಿ ತನ್ನ ಅಧಿಕಾರಾವಧಿ ಮುಗಿದು ಬರುತ್ತಿದ್ದಂತೆ ತನ್ನ ಸಿಹಿ-ಕಹಿ ನೆನಪುಗಳ ಬಗ್ಗೆ ಪುಸ್ತಕವೊಂದನ್ನು ಬರೆಯಬೇಕೆಂಬ ಇಚ್ಛೆ ಇದೆ ಎಂದು ಆಸೆ ವ್ಯಕ್ತಪಡಿಸಿರುವ ಅವರು, ತಾನು ಮತ್ತೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂಬರುವ ಮೇ ತಿಂಗಳಿನಲ್ಲಿ ಲೋಕಸಭೆಯಲ್ಲಿನ ತನ್ನ ಅಧಿಕಾರ ಅವಧಿ ಮುಗಿಯಲಿದ್ದು, ಅಲ್ಲುಂಟಾದ ಸಿಹಿ-ಕಹಿ ಅನುಭವಗಳೇನು ಎಂಬುದರ ಬಗ್ಗೆ ಪತ್ರಕರ್ತರು ಕೇಳಿದಾಗ, ಕೇವಲ ಸಿಹಿ ಅನುಭವಗಳಿದ್ದರೆ ಅದು ಚೆನ್ನಾಗಿರಲ್ಲ. (ಖಾಲಿ ಮೀಟಾ ಹೋನೆ ಸೇ ಅಚ್ಚಾ ನಹೀ ಲಗ್ತಾ ಹೈ) ಎಂದ ಅವರು, ಕೆಲವೊಮ್ಮೆ ಸ್ಪಲ್ಪ ಕಹಿ ಅನುಭವವೂ ಒಳ್ಳೆಯದೆನಿಸುತ್ತದೆ(ಥೋಡಾ ಕಟ್ಟಾ ಬೀ ಅಚ್ಚಾ ಲಗ್ತಾ ಹೈ ಕಬೀ ಕಬೀ) ಅದನ್ನು ಕೂಡಲೇ ಬರವಣಿಗೆಗೆ ಇಳಿಸಲಿದ್ದೇನೆ ಎಂದರು.
ಭಾರತ ಮತ್ತು ಅಮೆರಿಕ ನಡುವಿನ ಪರಮಾಣು ಒಪ್ಪಂದದ ಬಗ್ಗೆ ಯುಪಿಎ ಸರ್ಕಾರಕ್ಕಿರುವ ಬೆಂಬಲವನ್ನು ಸಿಪಿಐ(ಎಂ) ಹಿಂತೆಗೆದುಕೊಂಡಾಗ ತನ್ನ ಬೆಂಬಲವನ್ನು ಕೂಡ ಹಿಂತೆಗೆಯುವಂತೆ ಪಕ್ಷ ಚಟರ್ಜಿ ಅವರಿಗೆ ಒತ್ತಡ ಹೇರಿತ್ತು. ಆದರೆ ತಾನು ಎಲ್ಲಾ ಪಕ್ಷಗಳ ಬೆಂಬಲದಿಂದ ಚುನಾಯಿತನಾದ ಕಾರಣ ಕೈ ಬಿಡಬೇಕಾದ ಅವಶ್ಯಕತೆ ಇಲ್ಲ ಎಂದು ಚಟರ್ಜಿ ಹೇಳಿದ್ದು, ಆ ಕಾರಣದಿಂದ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. |