ಲೋಕಸಭೆ ಚುನಾವಣೆಗೆ ಮುನ್ನ ನಡೆಯಲಿರುವ, ಪ್ರಸಕ್ತ ಸಂಸತ್ತಿನ ಅಂತಿಮ ಅಧಿವೇಶನ ಗುರುವಾರ ಆರಂಭವಾಗಲಿದ್ದು, ರಾಮಮಂದಿರ ,ಭಯೋತ್ಪಾದನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಾಗ್ದಾಳಿ ನಡೆಸಲು ಪ್ರತಿಪಕ್ಷಗಳು ಸಜ್ಜಾಗಿವೆ.ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಇಂದು ಆರಂಭಗೊಳ್ಳಲಿರುವ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಯಾಗುವ ಎಲ್ಲಾ ಲಕ್ಷಣಗಳು ಇವೆ. ಸಂಸತ್‌ನಲ್ಲಿ ನಾಳೆ ಮಧ್ಯಂತರ ರೈಲ್ವೆ ಬಜೆಟ್ ಮಂಡನೆ, ಫೆ.16 ರಂದು ಸಾಮಾನ್ಯ ಬಜೆಟ್ ಮಂಡನೆ, ಹಾಗೂ ಅಧಿವೇಶನದ್ಲಿ ಒಟ್ಟು 27ವಿವಿಧ ಮಸೂದೆಗಳು ಮಂಡನೆಯಾಗುವ ಸಾಧ್ಯತೆ ಇದೆ.ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ವಾಸ್ತವದಲ್ಲಿ ಈಗಾಗಲೇ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿರುವುದರಿಂದ ಭಯೋತ್ಪಾದನೆ, ನಿರುದ್ಯೋಗ, ಹಣದುಬ್ಬರದಂತಹ ಪ್ರಮುಖ ವಿಷಯಗಳ ಬಗ್ಗೆ ಸಂಸದರ ನಡುವೆ ಕೋಲಾಹಲ ಸೃಷ್ಟಿಸಲಿದೆ. ಅಲ್ಲದೇ ಇದು ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಅವರಿಗೂ ಕೊನೆಯ ಅಧಿವೇಶನವಾಗಿದ್ದು, ಅವರು ಮೇ ತಿಂಗಳಿನಲ್ಲಿ ಸ್ಪೀಕರ್ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ. |