ಮುಂಬೈ ಉಗ್ರರ ದಾಳಿ ಸಂಬಂಧ ಭಾರತದ ವಶದಲ್ಲಿರುವ ಅಜ್ಮಲ್ ಕಸಬ್ ಸೇರಿದಂತೆ ಇತರ 13 ಮಂದಿಯ ಮೇಲೆ ಪಾಕಿಸ್ತಾನ ಭಯೋತ್ಪಾನೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆಯಾದರೂ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಬರದ ಕಾರಣ ಗೊಂದಲ ಮುಂದುವರಿದಿದೆ. ಅಲ್ಲದೆ ನಿನ್ನೆ ತಡರಾತ್ರಿ ಈ ವರದಿಗಳನ್ನು ಪಾಕಿಸ್ತಾನ ತಳ್ಳಿ ಹಾಕಿದ್ದು, ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹಲವು ದೇಶಗಳ ನಾಗರಿಕರೂ ಸೇರಿದಂತೆ 170ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ತಾನೇ ಸ್ವತಃ ತನಿಖೆ ನಡೆಸಿ ಈ ಸಂಬಂಧ ಪ್ರಕರಣ ದಾಖಲಿಸಿದೆ ಎಂದು ವರದಿಯಾಗಿತ್ತು.
"ಇದರ ಬಗ್ಗೆ ನನ್ನಲ್ಲಿ ಯಾವ ಅಧಿಕೃತ ಮಾಹಿತಿಗಳೂ ಇಲ್ಲ. ಪಾಕಿಸ್ತಾನ ಈ ನಿಟ್ಟಿನಲ್ಲಿ ನಮ್ಮಲ್ಲಿ ವ್ಯವಹಾರ ನಡೆಸಿಲ್ಲ. ಅವರೇನು ಮಾಡುತ್ತಾರೋ ಕಾದು ನೋಡೋಣ. ಅವರಿಂದ ಅಧಿಕೃತ ಮಾಹಿತಿಗಾಗಿ ನಾವು ಕಾಯುತ್ತಿದ್ದೇವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
ಪಾಕಿಸ್ತಾನದ ಮಾಧ್ಯಮಗಳು 13 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ಮಾಡಲಾಗಿದ್ದರೂ ಅಲ್ಲಿನ ಸರಕಾರ ವರದಿಗಳನ್ನು ತಳ್ಳಿ ಹಾಕಿವೆ. ಅಲ್ಲದೆ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಹಾಗಾಗಿ ಗೊಂದಲಗಳು ಮುಂದುವರಿದಿದೆ.
"ಪಾಕಿಸ್ತಾನದಿಂದ ಅಧಿಕೃತವಾಗಿ ನಮಗೆ ಮಾಹಿತಿ ಬರದ ಹೊರತು ಯಾವುದೇ ಪ್ರತಿಕ್ರಿಯೆ ನೀಡಲಾಗದು. ಈ ಬಗ್ಗೆ ಅಲ್ಲಿನ ಸರಕಾರ ಯಾವೊಂದು ಮಾತುಗಳನ್ನೂ ಬಹಿರಂಗವಾಗಿ ಹೇಳಿಲ್ಲ" ಎಂದು ಪಾಕ್ ವರ್ತನೆ ಬಗ್ಗೆ ಮುಖರ್ಜಿ ಅಸಮಾಧಾನ ವ್ಯಕ್ತಪಡಿಸಿದರು.
ಮುಂಬೈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತರ ಮೂವರು ಆರೋಪಿಗಳನ್ನು ಕರಾಚಿಯಲ್ಲಿ ಬಂಧಿಸಲಾಗಿದೆ. ಅಲ್ಲದೆ ಇತರ ಒಂಬತ್ತು ಮಂದಿಯನ್ನು ಗುರುತಿಸಲಾಗಿದ್ದು ಅತಿ ಶೀಘ್ರದಲ್ಲಿ ಬಂಧನವಾಗಬಹುದು ಎಂದೂ ಪಾಕ್ ಸುದ್ದಿ ವಾಹಿನಿಯೊಂದು ವರದಿ ಮಾಡಿತ್ತು.
ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ, ಶೀಘ್ರದಲ್ಲೇ ಭಾರತದ ಜತೆ ಪ್ರಕರಣಕ್ಕೆ ಸಂಬಂಧಿಸಿ ನೇರ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.
|