ಕಾಲೇಜುಗಳಲ್ಲಿ ನಡೆಯುವ ಕಾನೂನು ಬಾಹಿರ ರಾಗಿಂಗ್ ಪಿಡುಗು ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿ, ಈ ಬಗ್ಗೆ ನಿಯಮಾವಳಿ ಜಾರಿಗೊಳಿಸಿದೆ.
ಕಾಲೇಜುಗಳಲ್ಲಿ ರಾಗಿಂಗ್ ಪಿಡುಗು ತಡೆಯುವಲ್ಲಿ ವಿಫಲವಾದಲ್ಲಿ, ಅಂತಹ ಕಾಲೇಜುಗಳ ಅನುದಾನ ಕಡಿತಗೊಳಿಸುವ ಎಚ್ಚರಿಕೆ ನೀಡಲಾಗಿದೆ. ರಾಗಿಂಗ್ ತಡೆಗಟ್ಟಲು ಏನೇನು ಕ್ರಮ ಕೈಗೊಳ್ಳಬಹುದು ಎಂಬುದನ್ನು ಶಿಫಾರಸು ಮಾಡಲು ನ್ಯಾಯಾಲಯ ಸಮಿತಿಯೊಂದನ್ನು ನೇಮಿಸಿತ್ತು. ಅದರ ವರದಿಯನ್ನೇ ನಿಯಮಾವಳಿ ಎಂದು ಪರಿಗಣಿಸಬೇಕು ಎಂದು ಬುಧವಾರ ನಿರ್ದೇಶನ ನೀಡಿದೆ.
ರಾಗಿಂಗ್ ಪಿಡುಗು ತಡೆಗೆ ರೂಪಿಸಿದ ನಿಯಮಾವಳಿ ಪ್ರಕಾರ, ವಿದ್ಯಾರ್ಥಿಯೊಬ್ಬ ರಾಗಿಂಗ್ ಮಾಡುವುದು ಮೇಲ್ನೋಟಕ್ಕೆ ಸಾಬೀತಾದರೆ ಕೂಡಲೇ ಆತನನ್ನು ಕಾಲೇಜಿನಿಂದ ಅಮಾನತು ಮಾಡಬೇಕು. ತಮ್ಮ ಕಾಲೇಜಿನಲ್ಲಿ ರಾಗಿಂಗ್ ನಡೆಸಿದರೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದಕ್ಕಿಂತ ಮೊದಲೇ ಸ್ಪಷ್ಟವಾಗಿ ತಿಳಿಸಬೇಕು.
ರಾಗಿಂಗ್ ಮಾಡಿದ ವಿದ್ಯಾರ್ಥಿಯನ್ನು ಅಮಾನತು ಮಾಡದೆ, ಪೊಲೀಸರಿಗೆ ದೂರು ನೀಡದಿದ್ದರೆ ಅದಕ್ಕೆ ಶಿಕ್ಷಣ ಸಂಸ್ಥೆಯ ಹೊಣೆ. ರಾಂಗಿಂಗ್ ಮಾಡುವ ವಿದ್ಯಾರ್ಥಿ ವಿರುದ್ದ ಕ್ರಿಮಿನಲ್ ಮೊಕದ್ದಮೆ ಬಳಸಿ ಕ್ರಮ ಕೈಗೊಳ್ಳಬೇಕು.
ಈ ನಿಯಮಗಳು ವಿಶ್ವವಿದ್ಯಾಯದ ಅಡಿಯಲ್ಲಿ ಬರುವ ಕಾಲೇಜುಗಳು, ಭಾರತೀಯ ವೈದ್ಯಕೀಯ ಮಂಡಳಿಯಡಿ ಬರುವ ಕಾಲೇಜುಗಳು, ದಂತ ವೈದ್ಯ ಕಾಲೇಜುಗಳು, ಪಾಲಿಟೆಕ್ನಿಕ್ ಹಾಗೂ ಕೃಷಿ ಸಚಿವಾಲಯದಡಿ ಬರುವ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುತ್ತದೆ. |