ದೇಶಾದ್ಯಂತ ತೀವ್ರ ಕುತೂಹಲ ಹುಟ್ಟಿಸಿದ್ದ ನಿತಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಮೊನಿಂದರ್ ಸಿಂಗ್ ಪಂಧೇರ್ ಹಾಗೂ ಆತನ ಮನೆ ಕೆಲಸದಾಳು ಸುರೀಂದರ್ ಕೋಲಿ ಇಬ್ಬರು ತಪ್ಪಿತಸ್ಥರು ಎಂದು ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ಪ್ರಥಮ ಹಂತದ ತೀರ್ಪು ನೀಡಿದೆ.
ಅಪ್ರಾಪ್ತೆಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನೂ ತಪ್ಪಿತಸ್ಥರು ಎಂದು ಘೋಷಿಸಿರುವ ವಿಶೇಷ ನ್ಯಾಯಾಧೀಶರಾದ ರಾಮಾ ಜೈನ್ ಅವರು, ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಆರಂಭದಲ್ಲಿ ನಿರಪರಾಧಿಗಳು ಎಂದು ನ್ಯಾಯಾಲಯ ಬಿಡುಗಡೆ ಮಾಡಿತ್ತಾದರೂ, ಸಿಬಿಐ ಪ್ರಕರಣ ಮುಚ್ಚಿ ಹಾಕಲು ಮುಂದಾಗಿತ್ತಾದರೂ ಮಾಧ್ಯಮಗಳ ಒತ್ತಡದ ನಂತರ ಮರು ತನಿಖೆಯಿಂದ ಪ್ರಕರಣಕ್ಕೆ ಚಾಲನೆ ದೊರೆಯುವ ಮೂಲಕ ಪಂಧೇರ್ ಮತ್ತು ಕೋಲಿ ನ್ಯಾಯಾಲಯದ ಕಟ್ಟೆಕಟೆಯಲ್ಲಿ ನಿಲ್ಲುವ ಮೂಲಕ ತಪ್ಪಿತಸ್ಥರು ಎಂಬುದಾಗಿ ತೀರ್ಪು ನೀಡಿದೆ.
ನಾಪತ್ತೆಯಾಗಿದ್ದ 19ರ ಹರೆಯದ ರಿಂಪಾ ಹಲ್ದಾರ್ ಹಾಗೂ ಮಹಿಳೆಯೊಬ್ಬಾಕೆಯ ದೇಹದ ಭಾಗಗಳು ನೋಯ್ಡಾ ಸಮೀಪದ ನಿತಾರಿಯ ಮನೆಯ ಪಕ್ಕದ ಚರಂಡಿಯಲ್ಲಿ ಪತ್ತೆಯಾದ ನಂತರ ನಿತಾರಿ ಕೊಲೆ ಪ್ರಕರಣ ಒಂದೊಂದೇ ಬಯಲಾಗತೊಡಗಿತ್ತು.
ನಿತಾರಿ ನಿಗೂಢ ಹತ್ಯಾಕಾಂಡದ 19 ಪ್ರಕರಣಗಳಲ್ಲಿ ನ್ಯಾಯಾಲಯ ಆರೋಪಿಗಳಾದ ಮೊನಿಂದರ್ ಮತ್ತು ಕೋಲಿ ವಿರುದ್ಧ ಇಂದು ಪ್ರಥಮ ತೀರ್ಪನ್ನು ನೀಡಿದೆ.
ಇಬ್ಬರು ಕೊಲೆಗಡುಕರ ಮೇಲೆ ಭಾರತೀಯ ದಂಡ ಸಂಹಿತೆ 302, 376, 120ಬಿ, 201ರ ಪ್ರಕಾರ ದೂರು ದಾಖಲಿಸಿಕೊಳ್ಳಲಾಗಿದೆ, ಕ್ರಿಮಿನಲ್ ಆರೋಪ ಹೊತ್ತಿರುವ ಇಬ್ಬರಿಗೂ ಜೀವಾವಧಿ ಶಿಕ್ಷೆ ನೀಡುವ ಸಾಧ್ಯತೆ ಇದೆ. |