ಪಾಕಿಸ್ತಾನ ನೆಲೆಯಿಂದ ಭಯೋತ್ಪಾದನಾ ಕೃತ್ಯಗಳನ್ನು ನಡೆಸುತ್ತಿರುವ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕಠಿಣ ಹಾಗೂ ವಿಶ್ವಾಸಾರ್ಹ ಕ್ರಮಗಳನ್ನು ಕೈಗೊಳ್ಳುವಂತೆ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಆಗ್ರಹಿಸಿದ್ದಾರೆ.
ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳು ಸುಧಾರಣೆಯಾಗುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನ ನೆಲದಿಂದ ದಾಳಿಗಳು ನಡೆದಿರುವುದು ವಿಷಾದನೀಯ. ಇದರಿಂದ ದ್ವಿಪಕ್ಷೀಯ ಸಂಬಂಧ ಮಾತುಕತೆಗಳ ಪ್ರಕ್ರಿಯೆಗೆ ತೀವ್ರ ಹೊಡೆತ ಬಿದ್ದಿದೆ ಎಂದವರು ಇಂದಿನಿಂದ ಆರಂಭಗೊಂಡ ಸಂಸತ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದರು.
ಮುಂಬೈ ಮೇಲೆ ನಡೆದ ದಾಳಿಯು ಕಳೆದ 2004ರಿಂದ ನಡೆದಿದ್ದ ದ್ವಿಪಕ್ಷೀಯ ಸಂಬಂಧದ ಮಾತುಕತೆಯ ಪ್ರಕ್ರಿಯೆಗಳನ್ನು ನಾಶಗೊಳಿಸಿದೆ ಎಂದು ತಿಳಿಸಿದರು.
ಪಾಕಿಸ್ತಾನದ ಕಡೆಯಿಂದ ಭಾರತದ ಮೇಲೆ ದಾಳಿಗಳು ಮುಂದುವರಿದ ಪಕ್ಷದಲ್ಲಿ ಇಸ್ಲಾಮಾಬಾದ್ ತನ್ನ ವಿಧಿಯುಕ್ತ ಬದ್ದತೆಗಳನ್ನು ಕಡೆಗಣಿಸಿದಂತಾಗುತ್ತದೆ. ತನ್ನ ನೆಲೆಯಲ್ಲಿರುವ ಉಗ್ರರಿಗೆ ಎಲ್ಲವನ್ನು ನಿಯಂತ್ರಿಸುವ ಅವಕಾಶವನ್ನು ಪಾಕಿಸ್ತಾನ ನೀಡಬಾರದು ಹಾಗೂ ಭಾರತದ ಮೇಲೆ ದಾಳಿ ನಡೆಸಲು ಬಿಡಬಾರದು ಎಂದು ಪ್ರತಿಭಾ ಪಾಟೀಲ್ ಆಗ್ರಹಿಸಿದರು.
ಪಾಕಿಸ್ತಾನ ತನ್ನ ಬದ್ದತೆಗಳಿಗೆ ಅನುಗುಣವಾಗಿ ಗೌರವಯುತ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ನಾವು ನಿರೀಕ್ಷಿಸುತ್ತೇವೆ ಹಾಗೂ ಉಗ್ರರ ವಿರುದ್ಧ ನಿರ್ಣಯಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಮುಂಬೈ ದಾಳಿಯಲ್ಲದೆ ಕಾಬೂಲ್‌ನ ಭಾರತ ರಾಯಭಾರಿ ಕಚೇರಿ ಮೇಲೆ ನಡೆದ ದಾಳಿ, ದೆಹಲಿ, ಅಹಮದಾಬಾದ್, ಹೈದರಾಬಾದ್, ಜೈಪುರ್, ಬೆಂಗಳೂರು ಹಾಗೂ ಅಸ್ಸಾಂಗಳಲ್ಲಿ ಇತ್ತೀಚೆಗೆ ನಡೆದ ದಾಳಿಗಳ ಹಿಂದಿರುವ ಶಕ್ತಿಗಳ ಕುರಿತು ಮಾತನಾಡಲು ಪದಗಳು ಸಿಗುತ್ತಿಲ್ಲ ಎಂದರು. |