ರಾಜಭವನದತ್ತ ತೆರಳುತ್ತಿದ್ದ ಪ್ರತಿಭಟನಾ ಮೆರವಣಿಗೆ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಪರಿಣಾಮ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ನಾ ಹಾಗೂ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.
ಪೊಲೀಸ್ ಲಾಠಿ ಪ್ರಹಾರದಲ್ಲಿ ಮಹಿಳೆಯರು ಸೇರಿದಂತೆ ಒಟ್ಟು 20ಮಂದಿ ಗಾಯಗೊಂಡಿದ್ದಾರೆ. ಸಿನ್ನಾ ಅವರ ಕಿವಿಯ ಭಾಗಕ್ಕೆ ಹೊಡೆತ ಬಿದ್ದಿದ್ದು, ಮತ್ತಷ್ಷು ಪೆಟ್ಟು ಬೀಳುವ ಮುನ್ನ ಸಿನ್ನಾ ಅವರ ಮೂರು ಅಂಗರಕ್ಷಕರು ತಡೆಯುವ ಮೂಲಕ ಗಂಭೀರ ಗಾಯದಿಂದ ಪಾರಾಗುವಂತಾಗಿದೆ. ಆದರೂ ಅವರ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿರುವುದಾಗಿ ಮೂಲಗಳು ತಿಳಿಸಿವೆ.
ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಖಾಕಿ ಪಡೆ ಅಮಾನವೀಯವಾಗಿ ಲಾಠಿ ಪ್ರಹಾರ ನಡೆಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ನಡೆಸಿದ ಈ ಅಮಾನವೀಯ ಕೃತ್ಯದಲ್ಲಿ ಹಲವಾರು ಮುಖಂಡರು ಗಾಯಗೊಂಡಿದ್ದಾರೆ, ಈ ವಿಷಯವನ್ನು ತಾನು ಸಂಸತ್‌ನಲ್ಲಿ ಪ್ರಸ್ತಾಪಿಸುವುದಾಗಿ ಸಿನ್ನಾ ಹೇಳಿದರು.
ಮುಂಡಾ ಅವರ ಬಲಗೈಗೆ ಹೊಡೆತ ಬಿದ್ದಿದ್ದರೆ, ಬಿಜೆಪಿ ಮುಖಂಡ ಸೂರ್ಯ ರಾಯ್ ಅವರ ತಲೆಗೆ ಪೆಟ್ಟು ಬಿದ್ದಿದೆ, ಇದರಲ್ಲಿ ಪೊಲೀಸ್ ಹಾಗೂ ಅಗ್ನಿಶಾಮಕ ದಳದವರು ಸೇರಿದ್ದಾರೆ. ಅವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. |