ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ನಿತಾರಿ ಹತ್ಯಾಕಾಂಡ ಪ್ರಕರಣದ ಪ್ರಮುಖ ಆರೋಪಿಗಳಾದ ಮೊನಿಂದರ್ ಸಿಂಗ್ ಪಂಧೇರ್ ಹಾಗೂ ಸುರೀಂದರ್ ಕೋಲಿಗೆ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಿತಾರಿ ಹತ್ಯಾಕಾಂಡ ದೇಶದಲ್ಲಿ ನಡೆದ ಅಪರೂಪದಲ್ಲಿಯೇ ಅಪರೂಪವಾದ ಪ್ರಕರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಧೀಶರು ಪಂಧೇರ್ ಹಾಗೂ ಕೋಲಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದರು.
ನಿತಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಮೊನಿಂದರ್ ಸಿಂಗ್ ಪಂಧೇರ್ ಹಾಗೂ ಆತನ ಮನೆ ಕೆಲಸದಾಳು ಸುರೀಂದರ್ ಕೋಲಿ ಇಬ್ಬರು ತಪ್ಪಿತಸ್ಥರು ಎಂದು ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ಪ್ರಥಮ ಹಂತದ ತೀರ್ಪು ನೀಡಿತ್ತು.
ಕಿಕ್ಕಿರಿದು ತುಂಬಿದ್ದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ, ಆರೋಪಿ ಪಂಧೇರ್ ಹಾಗೂ ಕೋಲಿ ಉದ್ವಿಗ್ನತೆಯಿಂದ ಕೋರ್ಟ್‌ನಲ್ಲಿ ನಿಂತಿದ್ದರು. ಅವರಿಬ್ಬರು ಮಾತನಾಡುವ ಸ್ಥಿತಿಯಲ್ಲೂ ಇರಲಿಲ್ಲವಾಗಿತ್ತು. ಪಂಧೇರ್ ಮಗ ಹೆದರಿ ಉಗುರನ್ನು ಕಚ್ಚುತ್ತ ಕುಳಿತಿದ್ದ, ಯಾವಾಗ ನ್ಯಾಯಾಲಯ ಇಬ್ಬರಿಗೂ ಗಲ್ಲು ಶಿಕ್ಷೆ ಎಂದು ಘೋಷಿಸುತ್ತಿದ್ದಂತೆಯೇ, ಪಂಧೇರ್ ಪುತ್ರ ಕರಣ್ ಹಾಗೂ ಪತ್ನಿ ನ್ಯಾಯಾಲಯದಿಂದ ಹೊರನಡೆದಿದ್ದರು.
ಅಪ್ರಾಪ್ತೆಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನೂ ತಪ್ಪಿತಸ್ಥರು ಎಂದು ಘೋಷಿಸಿರುವ ವಿಶೇಷ ನ್ಯಾಯಾಧೀಶರಾದ ರಾಮಾ ಜೈನ್ ಅವರು, ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವುದಾಗಿ ತಿಳಿಸಿದ್ದರು.
ಆರಂಭದಲ್ಲಿ ನಿರಪರಾಧಿಗಳು ಎಂದು ನ್ಯಾಯಾಲಯ ಬಿಡುಗಡೆ ಮಾಡಿತ್ತಾದರೂ, ಸಿಬಿಐ ಪ್ರಕರಣ ಮುಚ್ಚಿ ಹಾಕಲು ಮುಂದಾಗಿತ್ತಾದರೂ ಮಾಧ್ಯಮಗಳ ಒತ್ತಡದ ನಂತರ ಮರು ತನಿಖೆಯಿಂದ ಪ್ರಕರಣಕ್ಕೆ ಚಾಲನೆ ದೊರೆಯುವ ಮೂಲಕ ಪಂಧೇರ್ ಮತ್ತು ಕೋಲಿ ನ್ಯಾಯಾಲಯದ ಕಟ್ಟೆಕಟೆಯಲ್ಲಿ ನಿಲ್ಲುವಂತಾಗಿತ್ತು.
ನಾಪತ್ತೆಯಾಗಿದ್ದ 19ರ ಹರೆಯದ ರಿಂಪಾ ಹಲ್ದಾರ್ ಹಾಗೂ ಮಹಿಳೆಯೊಬ್ಬಾಕೆಯ ದೇಹದ ಭಾಗಗಳು ನೋಯ್ಡಾ ಸಮೀಪದ ನಿತಾರಿಯ ಮನೆಯ ಪಕ್ಕದ ಚರಂಡಿಯಲ್ಲಿ ಪತ್ತೆಯಾದ ನಂತರ ನಿತಾರಿ ಕೊಲೆ ಪ್ರಕರಣ ಒಂದೊಂದೇ ಬಯಲಾಗತೊಡಗಿತ್ತು.
ನಿತಾರಿ ನಿಗೂಢ ಹತ್ಯಾಕಾಂಡದ 19 ಪ್ರಕರಣಗಳಲ್ಲಿ ನ್ಯಾಯಾಲಯ ಆರೋಪಿಗಳಾದ ಮೊನಿಂದರ್ ಮತ್ತು ಕೋಲಿ ವಿರುದ್ಧ ಗುರುವಾರ ಪ್ರಥಮ ತೀರ್ಪನ್ನು ನೀಡಿದ್ದು, ಶುಕ್ರವಾರ ಶಿಕ್ಷೆಯನ್ನು ಪ್ರಕಟಿಸಿದೆ.
|