ಮುಂಬೈ ಭಯೋತ್ಪಾದನಾ ದಾಳಿ ಬಗ್ಗೆ ಪಾಕಿಸ್ತಾನ ನೀಡಿರುವ ಪ್ರತಿಕ್ರಿಯೆ ಸಕರಾತ್ಮಕ ಬೆಳವಣಿಗೆಯಾಗಿದೆ ಎಂದಿರುವ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, ಪಾಕ್ ಸಂಚಿನ ವಿವರನ್ನು ಪೂರ್ಣವಾಗಿ ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು.
ದಾಳಿ ಕುರಿತಂತೆ ಗುರುವಾರ ಪಾಕಿಸ್ತಾನ ನೀಡಿರುವ ತನಿಖೆಯ ವಿವರ ಕುರಿತಾಗಿ ಶುಕ್ರವಾರ ಸಂಸತ್ ಬಜೆಟ್ ಅಧಿವೇಶನದಲ್ಲಿ ಮಾತನಾಡಿ ಪ್ರತಿಕ್ರಿಯೆ ನೀಡಿದರು.
ಅಲ್ಲದೇ 26/11ರ ದಾಳಿ ಕುರಿತಂತೆ ಪಾಕಿಸ್ತಾನ ನಿಷ್ಪಕ್ಷಪಾತವಾಗಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ದಾಳಿಯ ಷಡ್ಯಂತ್ರದ ಕುರಿತು ಪೂರ್ಣ ವಿವರ ಬಹಿರಂಗಪಡಿಸಬೇಕು ಎಂದರು.
ಆ ನೆಲೆಯಲ್ಲಿ ಪಾಕಿಸ್ತಾನದ ಪ್ರತಿಕ್ರಿಯೆ ಸೇರಿದಂತೆ ಎಲ್ಲಾ ಪರಿಸ್ಥಿತಿಯ ವಿಮರ್ಶೆ ಮುಂದುವರಿಸಲಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ನಮ್ಮ ಜನರಿಗೆ ಬೇಕಾದ ಸೂಕ್ತ ರಕ್ಷಣೆ ನೀಡಲಾಗುವುದು ಎಂದು ಹೇಳಿದರು.
ಭವಿಷ್ಯದಲ್ಲಿ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಬೇಕೆಂಬ ಆಶಯ ಇದ್ದರೆ, ಮುಂಬೈ ಭಯೋತ್ಪಾದನಾ ದಾಳಿಯ ಕುರಿತಂತೆ ಸಕರಾತ್ಮಕವಾದ ಕ್ರಮ ಕೈಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು. |