ಇತ್ತೀಚೆಗಷ್ಟೇ ಮಂಗಳೂರಿನ ಎಮ್ನೇಶಿಯಾ ಪಬ್‌ನಲ್ಲಿ ದಾಂಧಲೆ ನಡೆಸಿ, ಯುವತಿಯರನ್ನು ಥಳಿಸಿದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ವಕ್ತಾರೆ ಸುಶ್ಮಾ ಸ್ವರಾಜ್, ಶ್ರೀರಾಮಸೇನೆಯನ್ನು ತರಾಟೆಗೆ ತೆಗೆದುಕೊಂಡಿದ್ದು, ತನ್ನ ಮಗಳು ಲಂಡನ್‌ನಲ್ಲಿದ್ದು ಆಕೆಯೂ ಪಬ್‌ಗೆ ಹೋಗುತ್ತಾಳೆ ಅಲ್ಲಿ ಜ್ಯೂಸ್ ಕುಡಿಯುತ್ತಾಳೆ ಅದು ಅಪರಾಧವೇ ಎಂದು ಪ್ರಶ್ನಿಸಿದ್ದಾರೆ.ಜೀ ನ್ಯೂಸ್ ಜತೆ ಮಾತನಾಡಿದ ಸುಶ್ಮಾ, ಮಂಗಳೂರಿನಲ್ಲಿ ಶ್ರೀರಾಮಸೇನೆ ನಡೆಸಿದ ದಾಳಿಯನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು. ಇಂತಹ ನೈತಿಕ ಪೊಲೀಸ್ ಕಾರ್ಯಾಚರಣೆಯನ್ನು ವಿರೋಧಿಸುತ್ತೇನೆ. ಅಲ್ಲದೇ ನಾವು ನಮ್ಮ ಮಕ್ಕಳಿಗೆ ಉತ್ತಮ ನಡವಳಿಕೆಯನ್ನು ಕಲಿಸಬೇಕು, ಅದನ್ನು ಕೇಳದಿದ್ದರೆ ಪೋಷಕರು ಬುದ್ದಿವಾದ ಹೇಳಬೇಕು. ನನ್ನ ಸ್ವಂತ ಮಗಳೇ (ಲಂಡನ್‌ನಲ್ಲಿ) ಪಬ್‌ಗೆ ಹೋಗುತ್ತಾಳೆ, ಆದರೆ ಆಕೆ ಅಲ್ಲಿ ಜ್ಯೂಸ್ ಮಾತ್ರ ಕುಡಿಯುತ್ತಾಳೆ, ಆಕೆಯ ಸ್ನೇಹಿತರು ವೈನ್ ಸೇವಿಸುತ್ತಾರೆ ಎಂದು ಹೇಳಿದರು.ಯುವಪೀಳಿಗೆಯನ್ನು ಸಮರ್ಪಕ ಹಾದಿಯ ಮೂಲಕ ತಿದ್ದಬೇಕು, ಆದರೆ ಸಮಾಜದಲ್ಲಿ ನೈತಿಕ ಪೊಲೀಸ್ ಕಾರ್ಯಾಚರಣೆಯ ಅಗತ್ಯ ಇಲ್ಲ ಎಂದು ಸ್ವರಾಜ್ ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.ಮಂಗಳೂರು ಪಬ್ ಘಟನೆ ರಾಷ್ಟ್ರೀಯ ವಾಹಿನಿಗಳಲ್ಲಿ ಬಿತ್ತರಗೊಂಡು, ಸಾಕಷ್ಟು ವಾದ-ವಿವಾದಗಳನ್ನು ಹುಟ್ಟು ಹಾಕಿದ ಬಳಿಕ ಭಾರತೀಯ ಜನತಾಪಕ್ಷದ ಸುಶ್ಮಾ ಸ್ವರಾಜ್ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. |