ಬಿಜೆಪಿ ತೊರೆದಿರುವ ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಜೊತೆ ಸಖ್ಯ ಬೆಳೆಸಿದ ಸಮಾಜವಾದಿ ಪಕ್ಷದ ವಿರುದ್ಧ ಕಾಂಗ್ರೆಸ್‌ನ ಕೆಲ ನಾಯಕರು ಅನಾವಶ್ಯಕ ಹುಯಿಲೆಬ್ಬಿಸುತ್ತಿದ್ದಾರೆ ಎಂದಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್, ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿಯನ್ನು ಕಡಿದುಕೊಳ್ಳುವುದಿಲ್ಲ ಎಂದು ಶನಿವಾರ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಕೆಲವು ಮುಖಂಡರು ಕಲ್ಯಾಣ್ ಸಿಂಗ್ ಅವರ ವಿಷಯವನ್ನು ದೊಡ್ಡದಾಗಿ ಬೆಳೆಸುತ್ತಿದ್ದಾರೆ ಎಂದು ಸಿಂಗ್ ಅವರು ನ್ಯೂಸ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ದೂರಿದ್ದಾರೆ.
ಬಾಬ್ರಿ ಮಸೀದಿ ಧ್ವಂಸದ ನಂತರ, ಆ ಸ್ಥಳದಲ್ಲಿ ಮಸೀದಿಯನ್ನು ಪುನರ್ ನಿರ್ಮಿಸುವುದಾಗಿ ಕಾಂಗ್ರೆಸ್ ಹೇಳಿಕೆ ನೀಡಿತ್ತು, ಆದರೆ ಬಿಜೆಪಿ ರಾಮಮಂದಿರ ನಿರ್ಮಿಸುವುದಾಗಿ ಘೋಷಿಸಿತ್ತು. ಅವೆಲ್ಲಕ್ಕೂ ಹೊರತಾಗಿ ಬಿಎಸ್ಪಿಯ ಸ್ಥಾಪಕ ದಿ.ಕಾನ್ಶಿರಾಮ್ ಅವರು ಅಲ್ಲಿ ಶೌಚಾಲಯ ನಿರ್ಮಿಸಿ ಎಂದಿದ್ದರು ಎಂದು ಸಿಂಗ್ ಹೇಳಿದರು.
ಬಾಬ್ರಿ ಮಸೀದಿ ಧ್ವಂಸ ಸಂದರ್ಭದಲ್ಲಿ ಕಾಂಗ್ರೆಸ್ ಪಾತ್ರ ಏನಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಇದ್ದ ಸಂದರ್ಭದಲ್ಲಿ ಕೇವಲ ಶೇ.5ರಷ್ಟು ಮಸೀದಿ ಧ್ವಂಸಗೊಂಡಿರುವುದಾಗಿ ತಿಳಿಸಿದರು. ಬಳಿಕ ಕೇಂದ್ರದಲ್ಲಿ ನರಸಿಂಹರಾವ್ ಆಡಳಿತಾವಧಿಯಲ್ಲಿ ಉತ್ತರಪ್ರದೇಶದಲ್ಲಿ ಹೇರಿದ್ದ ರಾಷ್ಟ್ರಪತಿ ಆಡಳಿತ ಸಂದರ್ಭದಲ್ಲಿ ಉಳಿದ ಶೇ.95ರಷ್ಟು ಮಸೀದಿಯನ್ನು ಕೆಡವಲಾಯಿತು ಎಂದರು.
ಅಲ್ಲದೇ ಕಲ್ಯಾಣ್ ಸಿಂಗ್ ಜೊತೆಗಿನ ಮೈತ್ರಿಯನ್ನು ಬಲವಾಗಿ ಸಮರ್ಥಿಸಿಕೊಂಡ ಅಮರ್ ಸಿಂಗ್, ಬಾಬ್ರಿಮಸೀದಿ ಧ್ವಂಸ ಪ್ರಕರಣದಲ್ಲಿ ಕಾಂಗ್ರೆಸ್ ಹಾಗೂ ಕಲ್ಯಾಣ್ ಸಿಂಗ್ ಇಬ್ಬರೂ ಆರೋಪಿಗಳೇ ಎಂಬುದಾಗಿ ಹೇಳಿದರು.
ಕಾಂಗ್ರೆಸ್ ಜೊತೆ ಕೈಕುಲುಕಲು ನಾವು ಸಿದ್ದ, ಸರ್ಕಾರವನ್ನು ಉಳಿಸಲು ನಾವು ಕಾಂಗ್ರೆಸ್ ಜೊತೆ ಕೈಜೋಡಿಸಿದ್ದೇವೆ, ಪರಮಾಣು ಒಪ್ಪಂದದ ಅಂಕಿತಕ್ಕೂ ಬೆಂಬಲ ನೀಡಿದ್ದೇವು. ಹಾಗಾದರೆ ಬಿಜೆಪಿಯ ತತ್ವ ಸಿದ್ದಾಂತವನ್ನು ತಿರಸ್ಕರಿಸಿ ಬಂದಿರುವ ಕಲ್ಯಾಣ್ ಸಿಂಗ್ ಜೊತೆಗೆ ಯಾಕೆ ನಾವು ಮೈತ್ರಿ ಮಾಡಿಕೊಳ್ಳಬಾರದು ಎಂದು ಪ್ರಶ್ನಿಸಿದರು. |