ಒರಿಸ್ಸಾದ ಜೈಪುರ ಸಮೀಪ ಶುಕ್ರವಾರ ಸಂಜೆ ಸಂಭವಿಸಿದ ಹೌರಾ- ಚೆನ್ನೈ ಕೋರಮಂಡಲ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ದುರಂತದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಸಚಿವ ಆರ್.ವೇಲು, ರೈಲ್ವೆ ಮಂಡಳಿ ಅಧ್ಯಕ್ಷ ಎಸ್.ಎಸ್.ಖುರಾನಾ ಹಾಗೂ ಕೆಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ಹೇಳಿದ್ದಾರೆ.
ಹೌರಾ-ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ ಕನಿಷ್ಠ 16 ಮಂದಿ ಮೃತಪಟ್ಟಿದ್ದು 161 ಮಂದಿ ಗಾಯಗೊಂಡ ಘಟನೆ ಒರಿಸ್ಸಾದ ಜೈಪುರ ರೋಡ್ ಬಳಿ ಸಂಭವಿಸಿತ್ತು.
ಶುಕ್ರವಾರ ರಾತ್ರಿ ಸುಮಾರು 7.50ರ ಸಮಯಕ್ಕೆ ಒರಿಸ್ಸಾದ ಜೈಪುರ ರೋಡ್ ಬಳಿ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ 14 ಬೋಗಿಗಳು ಹಳಿ ತಪ್ಪಿದ್ದು, ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹೌರಾ ನಿಲ್ದಾಣದಿಂದ ಹೊರಟಿದ್ದ ರೈಲು ಶನಿವಾರ ಸಂಜೆ ಚೆನ್ನೈ ತಲುಪಬೇಕಿತ್ತು. ರೈಲು ಅತಿಯಾದ ವೇಗದಲ್ಲಿ ಚಲಿಸುತ್ತಿತ್ತು.
ರೈಲಿನ ಚಾಲಕ ಮತ್ತು ಉಪ ಚಾಲಕ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ರೈಲಿನಲ್ಲಿ ಒಟ್ಟು 24 ಬೋಗಿಗಳಿದ್ದವು. ದುರ್ಘಟನೆ ನಡೆದ ಜಾಗದಲ್ಲಿ ಕತ್ತಲು ಆವರಿಸಿದ್ದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿತ್ತು.
ಮೃತಪಟ್ಟವರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಹಾಗೂ ರೈಲ್ವೇಯಲ್ಲಿ ಒಂದು ಉದ್ಯೋಗ ಘೋಷಿಸಲಾಗಿದೆ. ಗಂಭೀರ ಗಾಯಗೊಂಡವರಿಗೆ 50 ಸಾವಿರ ಹಾಗೂ ಚಿಕ್ಕಪುಟ್ಟ ಗಾಯಗಳಾದವರಿಗೆ 10 ಸಾವಿರ ಪರಿಹಾರ ಪ್ರಕಟಿಸಲಾಗಿದೆ. |