ಪ್ರೇಮಿಗಳ ದಿನಾಚರಣೆಯ ಮುನ್ನಾ ದಿನ ದಂಪತಿಗಳನ್ನೇ ವಿನಾ ಕಾರಣ ಶಂಕಿಸಿ ಸಾರ್ವಜನಿಕವಾಗಿಯೇ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಲ್ಲೆ ನಡೆಸಿದ ಘಟನೆ ಹರ್ಯಾಣಾದಲ್ಲಿ ನಡೆದಿದ್ದು, ಘಟನೆ ಕುರಿತಂತೆ ಇಲಾಖೆ ತನಿಖೆಗೆ ಆದೇಶ ನೀಡಿದೆ.
ಇಲ್ಲಿನ ರೋಟಾಕ್ ರೋಡ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮೂಲಾ ರಾಮ್ ಎಂಬವರು ದಂಪತಿಗಳನ್ನು ಸಾರ್ವಜನಿಕರ ಎದುರೇ ಹಿಗ್ಗಾಮುಗ್ಗಾ ಥಳಿಸಿದ್ದರು, ಈ ಸಂದರ್ಭದಲ್ಲಿ ಸಾರ್ವಜನಿಕರು ಮೂಕಪ್ರೇಕ್ಷಕರಾಗಿ ನಿಲ್ಲುವಂತಾಗಿತ್ತು.
ಮೂಲಾ ರಾಮ್ ಅವರನ್ನು ಶುಕ್ರವಾರ ಇಲಾಖೆ ಸೇವೆಯಿಂದ ಅಮಾನತು ಮಾಡಿದ್ದು, ಘಟನೆ ಕುರಿತಂತೆ ಹಿರಿಯ ಅಧಿಕಾರಿಗಳಿಗೆ ವಿವರಣೆ ನೀಡಲಾಗಿದೆ.
ಈ ಬಗ್ಗೆ ಮೂಲಾ ರಾಮ್ ವಿರುದ್ಧ ಸ್ಥಳೀಯರು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಇಲಾಖೆ ತನಿಖೆ ಮಾಡುವಂತೆ ಆದೇಶ ನೀಡಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. |