ಕೇಂದ್ರದ ಯುಪಿಎ ಸರ್ಕಾರ ತನ್ನ ಕೊನೆಯ ಮಧ್ಯಂತರ ಬಜೆಟ್ ಅನ್ನು ಸೋಮವಾರ ಮಂಡಿಸಲಿದ್ದು, ಚುನಾವಣಾ ಹಿನ್ನೆಲೆಯಲ್ಲಿ ಜನಸಾಮಾನ್ಯ ಪರವಾದ ಬಜೆಟ್ ಮಂಡಿಸುವ ಸಾಧ್ಯತೆ ಇದೆ.
ಆರ್ಥಿಕ ಹಿಂಜರಿತದ ವಿರುದ್ಧ ಸೆಣಸುವುದರ ಜೊತೆಗೆ ಮತದಾರರನ್ನು ಓಲೈಸುವುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಮಧ್ಯಂತರ ಬಜೆಟ್ ಸಿದ್ದಪಡಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಾನುವಾರ ಪ್ರಧಾನಿ ಮನಮೋಹನ್ ಸಿಂಗ್ ಬಜೆಟ್ ಪ್ರತಿ ಮತ್ತು ಬಜೆಟ್ ಭಾಷಣಕ್ಕೆ ಸಮ್ಮತಿ ಸೂಚಿಸಿದರು ಹಾಗೂ ಸಂಪ್ರದಾಯದಂತೆ ಅದನ್ನು ಸಮ್ಮತಿಗಾಗಿ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗಿತ್ತು.
ಪ್ರಧಾನಿ ಸಿಂಗ್ ಅವರು ಹೃದಯ ಬೈಪಾಸ್ ಸರ್ಜರಿಯಿಂದಾಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು, ಅವರ ಗೈರು ಹಾಜರಿಯಲ್ಲಿ ಸದ್ಯ ಹಣಕಾಸು ಖಾತೆಯನ್ನೂ ಹೆಚ್ಚುವರಿಯಾಗಿ ಹೊಂದಿರುವ ವಿದೇಶಾಂಗ ವ್ಯವಹಾರ ಖಾತೆ ಸಚಿವ ಪ್ರಣವ್ ಮುಖರ್ಜಿ ಬಜೆಟ್ ಅನ್ನು ಇಂದು 11ಗಂಟೆಗೆ ಮಂಡಿಸಲಿದ್ದಾರೆ. ಭಾನುವಾರ ಪ್ರಧಾನಿ ಅವರ ರೇಸ್ ಕೋರ್ಸ್ ನಿವಾಸಕ್ಕೆ ತೆರಳಿದ ಮುಖರ್ಜಿ ಅವರು ಮಧ್ಯಂತರ ಬಜೆಟ್ ಬಗ್ಗೆ ಚರ್ಚಿಸಿದ್ದರು.
ಭಾರತ್ ನಿರ್ಮಾಣ್ಸ ಸರ್ವಶಿಕ್ಷಾ ಅಭಿಯಾನ ಹಾಗೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳಿಗೆ ಯುಪಿಎ ಹೆಚ್ಚಿನ ಹಣ ಒದಗಿಸುವ ಸಾಧ್ಯತೆ ಇದೆ. ಗ್ರಾಮೀಣಾಭಿವೃದ್ದಿಗಾಗಿ ಈಗ ನೀಡಲಾಗುತ್ತಿರುವ 39ಸಾವಿರ ಕೋಟಿ ರೂಪಾಯಿ ಧನ ಸಹಾಯವನ್ನು 55ಸಾವಿರ ಕೋಟಿ ರೂಗಳಿಗೆ ಹೆಚ್ಚಿಸುವ ಸಾಧ್ಯತೆ ಇದೆ. |